Tuesday, October 3, 2017

ಶ್ರೀನಿವಾಸನ ಫಾರಿನ್ ಹೆಂಡತಿ

ನುಗ್ಗೇಹಳ್ಳಿಯ ಶ್ರೀನಿವಾಸಾಚಾರ್ಯರಿಗೆ ಮೊನ್ನೆ ೮೮ ತುಂಬಿತು. ಒಂದಿಷ್ಟು, ಅತೀ ಕಡಿಮೆ ಅನ್ನುವಷ್ಟು, ಕಿವಿ ಕೇಳಿದರೆ ಅದೇ ಹೆಚ್ಚು. (ಅಷ್ಟಾದರೂ ಭಾಗಮ್ಮ ಯಜಮಾನರೊಂದಿಗೆ ಯಾವುದಾದರೂ ವಿಷಯಕ್ಕೆ ಜಗಳ ಆಡುವುದನ್ನು ನಿಲ್ಲಿಸಿಲ್ಲ.) ಯಾವಾಗಾದರೊಮ್ಮೆ ಮಂಡಿ ನೋವು ಅನ್ನುತ್ತಾರೆ. ಈಗಲೂ ತಮ್ಮ ತಟ್ಟೆ ತಾವೇ ತೊಳೆದುಕೊಳ್ಳಬೇಕೆಂಬ ನಿಯಮ ಪಾಲಿಸುವ ಅವರು, ಅವರ ವಯಸ್ಸಿಗೆ ಆರೋಗ್ಯವಾಗಿದ್ದಾರೆಂದೇ ಹೇಳಬೇಕು. ಆಹಾರದಲ್ಲಿ ತುಂಬಾ ಕಟ್ಟುನಿಟ್ಟು. ಒಂದು ರೊಟ್ಟಿ ಅಂದರೆ, ಒಂದೇ. ನೀವೇನಾದರೂ ಬಲವಂತ ಮಾಡಿ ಇನ್ನೊಂದು ಕಾಲು ಭಾಗ ಹಾಕಿದಿರೋ.. ಅದು ಹೋಗುವುದು ಕಲಗಚ್ಚಿಗೇ. ಆದರೆ, ತಿಂಗಳಿಗೊಮ್ಮೆ ಮೊಮ್ಮಗನ ಮನೆಗೆ ಹೋದಾಗ, ಅವನ ಹೆಂಡತಿ, ಆ ಹೆಣ್ಣು ಮಗು ಶಾಲಿನಿ, ಅಂಗಡಿಯಿಂದ ಅದೆಂತದು? ಗಟ್ಟಿ ಮೊಸರು? ಮಾಮೂಲಿ ಮೊಸರಲ್ಲ. ಇಲ್ಲಿ ಸಿಗುವುದೇ ಇಲ್ಲ, ಇಲ್ಯಾಕೆ ಚನ್ನರಾಯಪಟ್ಟಣದಲ್ಲೂ ಸಿಗೊಲ್ಲ, ಚಾಕುವಿನಲ್ಲಿ ಕತ್ತರಿಸಬೇಕು, ಆ ಥರಹದ ಗಟ್ಟಿ ಮೊಸರು ತಂದು, ಮೊಸರಿನ ಅನ್ನ ಕಲಸಿ, ಬಡಿಸುವ ಎರಡು ನಿಮಿಷ ಮೊದಲು, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ಮೆಣಸು, ಜೀರಿಗೆ, ಒಂದಿಷ್ಟು ತೆಂಗಿನ ತುರಿ ಹಾಕಿ ಕಲಸಿ ಕೊಟ್ಟರೆ, ನಾಲ್ಕು ತುತ್ತು ಹೆಚ್ಚೇ ಒಳಗೆ ಹೋಗುತ್ತಿತ್ತು. 'ಒಳ್ಳೆಯ ಹೆಣ್ಣು ಹುಡುಗಿ ಅದು. ನಮ್ಮ ಮೇಷ್ಟ್ರ ಮನೆ ಕಡೆಯ ಸಂಭಂಧ.' ಅಂದುಕೊಳ್ಳುವರು.

ತಾತನದೇ ಹೆಸರಿಟ್ಟುಕೊಂಡ ಶ್ರೀನಿವಾಸ ಅವರಮ್ಮನ ಥರ ರೊಮ್ಯಾಂಟಿಕ್ ಫೆಲೊ. ಪ್ರೀತಿಯ ಬಗ್ಗೆ ಅವರಮ್ಮ ಹೇಳಿದ 1970s ಕಥೆಗಳನ್ನೆಲ್ಲಾ ನಂಬಿಕೊಂಡು, ಒಂದಿಬ್ಬರು ಹುಡುಗಿಯರನ್ನ ನ್ಯಾಯವಾಗಿ ಪ್ರೀತಿಸಿದ್ದೂ ಆಯಿತು, ಅವರು ಬಿಟ್ಟು ಹೋದದ್ದೂ ಆಯಿತು. ಕೊನೆಗಿವನು ಮನೆಯವರು ತೋರಿಸಿದ ಹುಡುಗಿಗೆ ಮಾರು ಹೋಗಿ, "ಸರಿ ನೀವು ಹೇಳಿದ ಹುಡುಗೀನೇ ಆಗಲಿ. ಆದರೆ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ಆಗ್ತೀನಿ." ಅಂದಿದ್ದಕ್ಕೆ ಮನೆಯವರೆಲ್ಲಾ ಮುಖಕ್ಕೆ ಮಂಗಳಾರತಿ ಮಾಡಿ, 'ಈಗಲೇ ಮಾವನ ದುಡ್ಡುಳಿಸುವ ಹುಕಿ.' ಅಂತ ಛೇಡಿಸಿದ್ದಲ್ಲದೆ, ಅದ್ದೂರಿಯಾಗಿ ದೊಡ್ಡ ಛತ್ರದಲ್ಲಿ ಮೂರು ದಿನ ಮದುವೆ ಮಾಡಿಸಿದ್ದರು. ಅದನ್ನೆಲ್ಲಾ ನೆನಸಿಕೊಂಡರೆ ಶ್ರೀನಿವಾಸನಿಗೆ ಈಗಲೂ ಮೈ ಉರಿದು ಹೋಗುತ್ತದೆ.

ಶ್ರೀನಿವಾಸಾಚಾರ್ಯರಿಗೆ ಕಿವಿ ಕೇಳುವುದು ಕಡಿಮೆಯಾದಂತೆ ಅವರ ಸ್ನೇಹಿತರ ಬಳಗವೂ ಕುಗ್ಗುತ್ತಾ ಹೋಗಿದೆ. ಬಹಳಷ್ಟು ಆಪ್ತರು ಆಗಲೇ ವೈಕುಂಠದ ಬಾಗಿಲು ತಟ್ಟಿದ್ದರೆ, ಉಳಿದವರು ಮಕ್ಕಳ ಮನೆ ಸೇರಿದ್ದಾರೆ. ಇನ್ನು ಊರಿನಲ್ಲಿರುವ ಉಳಿದವರು ಕಂಡಾಗ, ಗೌರವದಿಂದ 'ಹೇಗಿದೀರ ತಾತ?' ಅಂತಲೊ, 'ಐನೋರೆ ಆರಾಮಕ್ಕದೀರ' ಅಂತಲೊ ಕೇಳುತ್ತಾರೆ. ಅಷ್ಟೇ. 'ಸ್ವಲ್ಪ ಕಾಲು ನೋವು,' ಅಂದರೆ, 'ನಿಮ್ಮ ವಯಸ್ಸಿಗೆ ಇದೇನೂ ಅಲ್ಲವೇ ಅಲ್ಲ, ನಮ್ಮ ಮನೆಯವಳಿಗೆ ಈಗಲೇ, ಇನ್ನೂ ಐವತ್ತಕ್ಕೇ ಮಂಡಿ ಸೆಳೆತ.' ಅನ್ನುತ್ತಾರೆ. ಶ್ರೀನಿವಾಸಾಚಾರ್ಯರು ಬೆಳಗ್ಗೆ ಐದೂ-ಮೂವತ್ತು, ಆರಕ್ಕೆಲ್ಲಾ ಎದ್ದು, ಸ್ನಾನ, ಸಂಧ್ಯಾವಂದನೆ, ಔಪಾಸನಾ ಹೋಮ ಮುಗಿಸಿ, ಭಾಗಮ್ಮ ಕೊಟ್ಟ ಕಾಫಿ ಕುಡಿದು, ತಿಂಡಿ ಶಾಸ್ತ್ರ ಮಾಡಿ, ಮತ್ತೊಂದು ಲೋಟ ಕಾಫಿ ಹಿಡಿದು, ಜಗಲಿ ಕಟ್ಟೆಯ ಮೇಲೆ ಬಂದು ಕೂತರೆ, ದಾರಿಹೋಕರೆಲ್ಲ ತಾವಾಗಿಯೇ ಮಾತನಾಡಿಸುತ್ತಾರೆ, ಹನ್ನೊಂದು ಗಂಟೆಯ ಮೇಲೆ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಮೇಲೆ, ಇವರು ಒಬ್ಬರೇ ಆದಾಗ, ಒಂದಷ್ಟು ಆತ್ಮಾವಲೋಕನ ಮಾಡಿಕೊಂಡು, ಬಿಸಿಲೇರುವ ಹೊತ್ತಿಗೆ ಒಳಗೆ ಬಂದು ಒಂದು ಕುಸ್ತು ನಿದ್ದೆ ಹೋಗುತ್ತಾರೆ. ಊರಿನ ಆಗುಹೋಗುಗಳ ಬಗೆಗೆ ಅಪ್ಡೇಟ್ ಆಗಲು, ಸಂಜೆ ಐದರ ಸುಮಾರಿಗೆ ಕಾಫಿ ಕುಡಿದು, ಊರನ್ನು ಒಂದು ಸುತ್ತು ಹಾಕಿ, ಮತ್ತೆ ಸಿಕ್ಕವರನ್ನು ಮಾತಾಡಿಸಿ, ಊರ ಹೊರಗಿನ ತೋಟದವರೆಗೂ ಹೋಗಿ ಬರುತ್ತಾರೆ. ತೋಟದಲ್ಲಿ ಮಾಡಲೇನಾಗದಿದ್ದರೂ, ಬರುವಾಗ ಪೋಸ್ಟ್ ಮಾಸ್ಟರ್ ಮನೆಯ ಹುಡುಗ ಗೋಪಿ (ಅವನಿಗಿನ್ನೂ ನಲವತ್ತೂ ಆಗಿಲ್ಲವೇನೋ.) ಸಿಗುತ್ತಾನೆ. ಅವನೊಬ್ಬನೇ ತಮಗೆ ಸರಿಯಾಗಿ ಕೇಳುವಂತೆ ಮಾತಾಡುವುದು. ಅದ್ಯಾವ ಪ್ರೀತಿಯೋ. ಊರ ಕಥೆಗಳೆಲ್ಲವನ್ನೂ ಹೇಳುತ್ತಾನೆ. ಅವನ ಮನೆ ತಲುಪಿ ಅವನ ಹೆಂಡತಿ ಕೊಟ್ಟ ಕಾಫಿ ಕುಡಿದೇ ಇವರು ತಮ್ಮ ಮನೆಗೆ ವಾಪಾಸ್ಸಾಗುವುದು.

ಅವನು ಹೇಳಿಯೇ ಅವರಿಗೆ ಕಲ್ಕುಂಟೆಯ ಶಲ್ವಪಿಳ್ಳೆಯ ಕಥೆ ಗೊತ್ತಾದದ್ದು. ಶಲ್ವಪಿಳ್ಳೆಗೆ ವಯಸ್ಸಾದದ್ದು ಹೌದು, ಜಬರದಸ್ತು ಕಮ್ಮಿಯಾಗಲಿಲ್ಲ. ಇನ್ನೂ ಮೂವತ್ತರ ಹರೆಯದವನ ಥರ ಕೋರ್ಟು ಕಛೇರಿ ಅಂತ ಅಲೆಯುವ ಹುಕಿ. ಹೊಸಕೋಟೆಯಲ್ಲಿ ಬಸ್ಟ್ಯಾಂಡ್ ಬಳಿಯ ಕಾರ್ನರ್ ಸೈಟಿನ ಮಳಿಗೆಯನ್ನು ಮಾರಿ ದುಡ್ದನ್ನು ಮುಚ್ಚಿಟ್ಟು, ಮಳಿಗೆ ಕೊಂಡವನ ಮೇಲೇ ಕೇಸು ಹಾಕಿ ಬಿಡೋದೆ? 'ನನಗೆ ಮೋಸ ಆಗಿದೆ, ನಾನು ಮಳಿಗೆ ಮಾರಿಯೇ ಇಲ್ಲ.' ಅಂದನಂತೆ ಜಡ್ಜಿನ ಮುಂದೆ. ದುಡ್ಡು ಕೊಟ್ಟು, ಮಳಿಗೆ ಕೊಂಡವನನ್ನು ಕಲ್ಕುಂಟೆಯ ರಂಗನಾಥಸ್ವಾಮಿಯೇ ಕಾಪಾಡಬೇಕು. ಇನ್ನು ಎಂ.ಎ ಗೌಡರ ಒಬ್ಬನೇ ಮಗ ಯಾರೋ ಒಡಿಸ್ಸಾದ ಹುಡುಗಿಯನ್ನು ಪ್ರೀತಿಸಿದಾನಂತೆ. ಎಷ್ಟೋ ದಿನದಿಂದ ಒಟ್ಟಿಗೇ ಇದಾರಂತೆ. ಮದುವೆಗೆ ಮೊದಲೇ. 'ಇದೆಲ್ಲಾ ಈಗ ಬೆಂಗಳೂರಲ್ಲಿ ಕಾಮನ್ನು' ಅಂದ ಗೋಪಿ. 'ಕಾಮನ್ನಾಗಿರೋದೆಲ್ಲಾ ಸರಿ' ಅಂತೇನಲ್ಲವಲ್ಲ. ಗೌಡರು ಅದಕ್ಕೇ ಮಗನ ವಿಷಯವನ್ನೇ ಎತ್ತುತ್ತಿರಲಿಲ್ಲ. ಪಾಪ ಅಂದುಕೊಂಡರು. ಸಧ್ಯ ನನ್ನ ಮಕ್ಕಳೂ, ಮೊಮ್ಮೊಗನೂ ಇಂಥದೇನೂ ಮಾಡಿಕೊಳ್ಳಲಿಲ್ಲವಲ್ಲ. ಅಂತ ಸಮಾಧಾನವಾಯಿತು.

ಇದ್ದಕ್ಕಿದ್ದಂತೆ ತನ್ನ ಮೂವರು ಮಕ್ಕಳು, ಸೊಸೆ ಎಲ್ಲರೂ ಒಟ್ಟಿಗೆ ಊರಿಗೆ ಬಂದದ್ದು ಶ್ರೀನಿವಾಸಾಚಾರ್ಯರಿಗೆ ಕುತೂಹಲ ಹುಟ್ಟಿಸಿತು. ಗಂಡು ಮಕ್ಕಳಿಬ್ಬರೂ ಲೊಕಾಭಿರಾಮವಾಗಿ ಮಾತಾಡುತ್ತಾ ಕೂತಿದ್ದರೂ ರಾಘವನ ಮುಖ ಮ್ಲಾನವಾಗಿತ್ತು. ಮಗಳು ಜ್ಯೋತ್ಸ್ನ, ಸೊಸೆ ಸ್ನೇಹ, ಭಾಗಮ್ಮನ ಜೊತೆ ಅಡುಗೆ ಮನೆ ಸೇರಿದವರು ಹೊರಗೆ ಬರಲೇ ಇಲ್ಲವಲ್ಲಾ ಎಂದುಕೊಂಡು ಒಳಹೋದರೆ, ಭಾಗಮ್ಮನಿಗೆ ಬೇಜಾರಾಗಿದೆಯೆನ್ನುವುದು ಮುಖಚರ್ಯೆಯಲ್ಲೇ ತಿಳಿಯುತ್ತಿತ್ತು. ಏನಾಯಿತೆಂದು ಮಗಳ ಮುಖ ನೋಡಿದರು. 'ಅಪ್ಪಾ ಕಿರುಚಿಕೊಂಡು ಹೇಳೊ ವಿಷಯವಲ್ಲ ರಾಘವ ಆಮೇಲೆ ತಿಳಿಸುತ್ತಾನೆ.' 'ಶ್ರೀನಿವಾಸನ ವಿಷಯ' ಅಂದಳು. ಇವರಿಗೆ ದಿಗಿಲಾಯಿತು. 'ಆರೋಗ್ಯವಾಗಿದಾನ್ಯೇ? ಕೆಲಸ ಹೋಯಿತೋ?' ಅಂತ ತಕ್ಷಣಕ್ಕೆ ತೋಚಿದ್ದನ್ನ ಕೇಳಿದರು. 'ಮೆಲ್ಲಗೆ ಮಾತಾಡಿ' ಎಂದು ಸಂಜ್ಞೆ ಮಾಡುತ್ತಾ 'ಅದ್ಯಾವುದೂ ಅಲ್ಲ. ಸ್ವಲ್ಪ ಹೊತ್ತು ಸುಮ್ಮನಿರಿ.' ಅಂದರು ಭಾಗಮ್ಮ. ಸಂಜ್ಞೆ ಮಾಡಿದ್ದು ತಿಳಿದರೂ ಬೇರೇನೂ ತಿಳಿಯದೆ ಸೊಸೆಯ ಕಡೆ ಹತಾಶರಾಗಿ ನೋಡಿದರು. "ಮಾವಾ ಆಮೇಲೆ ಇವರೇ ತಿಳಿಸುತ್ತಾರೆ. ಜೋರಾಗಿ ಮಾತನಾಡಿದರೆ ಅಕ್ಕಪಕ್ಕದ ಮನೆಯವರಿಗೆ ಕೇಳಿಸುತ್ತೆ." ಎಂದು ನಿಧಾನವಾಗಿ ಕೇಳಿಸುವಂತೆ ಹೇಳಿದಳು. ಬೇರೆಯವರಿಗೆ ತಿಳಿಯಬಾರದಂಥಾ ವಿಷಯ ಎಂದು ಇನ್ನೂ ದಿಗಿಲಾಯಿತು. ಕಿವಿಕೇಳಿಸದೆ ಹೀಗಾಗಿ ಹೋಯಿತಲ್ಲಾ ಎಂದು ಸಿಟ್ಟು ಬಂತು. "ಇಷ್ಟನ್ನಾದರೂ ಸಮಾಧಾನವಾಗಿ ಹೇಳಿದಳು ಸೊಸೆ. ಸೊಸೆಗೆ ಮೊದಲಿನಿಂದಲೂ ಸಮಾಧಾನ ಜಾಸ್ತಿ. ಈ ರಾಘವನ ಜೊತೆ ಸಮಾಧಾನ ಇಲ್ಲದವರು ನೀಸಲು ಸಾಧ್ಯವಿತ್ತೇ ಅಂದುಕೊಂಡು ಅಡುಗೆ ಮನೆಯಿಂದ ಹೊರನಡೆದರು.

ರಾಘವ ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಊರ ಹೊರಗಿನ ನಾಲೆ ಬಳಿ ಬಂದು ನಿಲ್ಲಿಸಿದ. ನಾಲೆಯಲ್ಲಿ ಈಗ ನೀರಿರಲಿಲ್ಲ. ಶ್ರೀನಿವಾಸನನ್ನು ಇಲ್ಲಿಗೆ ಈಜು ಕಲಿಸಲು ಪ್ರತೀ ವರ್ಷ ಕರೆದುಕೊಂಡು ಬರುತ್ತಿದ್ದುದು ನೆನಪಾಯಿತು. ಇವರು ರಾಘವನನ್ನೇ ನೋಡುತ್ತಿದ್ದರು. ಅವನು ನಾಲೆ ನೋಡುತ್ತಿದ್ದ. ಮುರಳಿಯಂತೂ ತನ್ನನ್ನೆಲ್ಲಿ ಕೇಳಿಬಿಡುತ್ತಾರೋ ಎನ್ನುವಂತೆ ತಲೆತಗ್ಗಿಸಿಕೊಂಡು ನಿಂತಿದ್ದ. 'ಶ್ರೀನಿವಾಸ ತನ್ನ ಹೆಂಡತಿಗೆ ಡಿವೋರ್ಸ್ ಕೊಡುತ್ತಾನಂತೆ.' ಅಂದ ರಾಘವ. ಇವರಿಗೆ ಕಕ್ಕಾಬಿಕ್ಕಿಯಾಯಿತು. ಕೇಳಿಸಲಿಲ್ಲವೋ, ಹೇಳಿದ್ದು ಮನಸ್ಸೊಳಗೆ ಇಳಿಯಲಿಲ್ಲವೋ, 'ಏನದು?' ಅಂದರು. ಮುರಳಿ ಹೇಳಿದ 'ಅಪ್ಪಾ ಅವನಿಗೂ ಶಾಲಿನಿಗೂ ಹೊಂದಿಕೆಯಾಗುತ್ತಿಲ್ಲವಂತೆ ದಿನಾ ಜಗಳವಂತೆ. ಇವನಿಗೆ ಸಾಕಾಗಿದೆ.' ಇವರಿಗೆ ಕೋಪ ನೆತ್ತಿಗೇರಿತು. 'ನಿಮ್ಮಮ್ಮನೂ ನನ್ನ ಜೊತೆ ನಿತ್ಯವೂ ಜಗಳವಾಡುತ್ತಾಳೆ, ಆಡಿದ್ದಾಳೆ. ಡಿವೋರ್ಸ್ ಕೊಟ್ಟು ಬಿಡಲೇ?' ಅಂದರು. ಮಕ್ಕಳಿಬ್ಬರೂ ಮಾತಾಡದೇ ನಿಂತಿದ್ದರು. 'ಈ ಕಿವುಡನ ಹತ್ತಿರ ಮಾತಾಡೋದೇನು ಅಂತ ಸುಮ್ಮನೆ ನಿಂತಿದ್ದೀರೋ?' ಮತ್ತೆ ಗದರಿದರು. 'ಅಪ್ಪಾ ಕೋಪಿಸ್ಕೋಬೇಡ. ರಾಘವನಿಗೆ ಮೊದಲೇ ಬೇಜಾರಾಗಿದೆ. ಇನ್ನೇನು ಮಾತಾಡುತ್ತಾನೆ?' ಎಂದ ಮುರಳಿ. 'ನಿನ್ನ ನಾಲಿಗೆ ಬಿದ್ದು ಹೋಗಿದ್ಯೇನು? ನೆಟ್ಟಗೆ ಏನಾಯಿತು ಅಂತ ಹೇಳು. ನೀನು ವಹಿಸಿಕೊಂಡು ಬರಬೇಡ ಅವನಿಗೆ ಬುದ್ದಿ ಹೇಳಿದಿರೋ ಇಲ್ಲವೋ? ಶ್ರೀನಿವಾಸನಿಗೆ ತೆಂಗಿನ ವರಗಲ್ಲಿ ನಾಲ್ಕು ಬಿಡಬೇಕು. ಅಷ್ಟು ಒಳ್ಳೆ ಹೆಣ್ಣು ಮಗಳ ಜೊತೆ ಬಾಳ್ವೆ ಮಾಡಲಾಗದವನು ಇನ್ನೇನು ಮಾಡಿಯಾನು? ನಾನು ಹೋಗಿ ಮಾತಾಡಿ ಬರುತ್ತೇನೆ.' ಅಂದರು.

ಅತ್ತೆ ಜೋತ್ಸ್ನ, 'ತಾತ ನಿನ್ನ ಜೊತೆ ಮಾತಾಡಬೇಕಂತೆ. ಬೆಂಗಳೂರಿಗೆ ಬರುತ್ತಾರೆ ನಮ್ಮ ಜೊತೆ. ಎಷ್ಟು ಹೇಳಿದರೂ ಕೇಳುತ್ತಿಲ್ಲ.' ಅಂದಾಗ 'ಸರಿ ಅತ್ತೆ.' ಅನ್ನುವಷ್ಟು ಚೈತನ್ಯವೂ ಶ್ರೀನಿವಾಸನಿಗೆ ಉಳಿದಿರಲಿಲ್ಲ. ಹುಡುಗೀರ ವಿಷಯದಲ್ಲಿ ತನಗೆ ಬರೀ ಸರ್ಪ್ರೈಸುಗಳೇ ಅಂತ ತನ್ನ ಸ್ಥಿತಿಗೆ ತನಗೇ ನಗು ಬಂತು. 'ಶಾಲಿನಿ ಎಲ್ಲಾ ವಿಷಯದಲ್ಲೂ ಎಲ್ಲರಿಗೂ ಒಪ್ಪಿಗೆಯಾಗುವಂತೆ, ಯಾರಿಗೂ ಬೇಸರವಾಗದಂತೆ, ತುಂಬಾ ಲವಲವಿಕೆಯಿಂದ ಇದ್ದುದರಿಂದ, ಎಲ್ಲರೂ ಅವಳನ್ನು ಇಷ್ಟಪಡುತ್ತಾರೆ. ನನಗೆಷ್ಟು ಹೆಮ್ಮೆ ಇತ್ತು. ಹೀಗೆ ಮೋಸ ಹೋಗಿಬಿಟ್ಟೆನಲ್ಲಾ. ನನಗ್ಯಾಕೆ ತೋಚಲೇ ಇಲ್ಲ. ಸ್ವಲ್ಪ ಎರಾಟಿಕ್ ಆಗಿ ಮಾತಾಡಿದರೂ ಹೆಚ್ಚು ಸ್ಪಂದಿಸುತ್ತಿರಲಿಲ್ಲ. ನಾಚಿಕೆ ಅಂದುಕೊಂಡು ಮೋಸ ಹೋದೆ. ಮದುವೆಯಾದಮೇಲೂ ಯಾವತ್ತಿಗೂ, ಒಂದೇ ಒಂದು ದಿನಕ್ಕೂ ಅವಳಾಗೇ ಆಸಕ್ತಿ ತೋರಿಸಿದವಳಲ್ಲ ಸುಮ್ಮನೆ ಕೊರಡಿನ ಥರ ಇರುತ್ತಿದ್ದಳಲ್ಲ. ನನ್ನ ದಡ್ಡ ಬುದ್ದಿಗೆ ಹೊಳೆಯಲೇ ಇಲ್ಲ. ಇದನ್ನೆಲ್ಲಾ ಎಲ್ಲರಿಗೂ ಹೇಗೆ ಹೇಳಲಿ. ತಾತನಿಗೆ ಇಂಥದನ್ನು ಅರ್ಥ ಮಾಡಿಸಲು ಯಾವತ್ತಿಗಾದರೂ ಸಾಧ್ಯವೇ? ಬಿಯರ್ ಕುಡಿಯಲು, ಸಿನೆಮಾ, ನಾಟಕ ನೋಡಲು, ಯಾವುದೋ ಮದುವೆ ಮುಂಜಿಗೆ ಹೋಗಲು ಜೊತೆಯಾದರೆ ಸಾಕೆ? ಜೊತೆಗೆ ಸಂಸಾರ ಮಾಡೊಕ್ಕಾಗಲ್ಲ ಅಂದಮೇಲೆ ಏನುಪಯೋಗ?' ಇಷ್ಟು ದಿನ ಅವಳ ಜೊತೆ ಕಳೆದ ಘಳಿಗೆಯೆಲ್ಲಾ ಒಂದು ಸುಳ್ಳಿನಂತೆ ಅನ್ನಿಸಿತು.

ಶ್ರೀನಿವಾಸ ಮದುವೆಯಾದ ಮೇಲೆ ಖರೀದಿಸಿದ ಮರಿಯಪ್ಪನ ಪಾಳ್ಯದ ಅವನ ಮನೆಗೆ, ನುಗ್ಗೇಹಳ್ಳಿಯಿಂದ ಹೆಚ್ಚೆಂದರೆ ಮೂರು ಗಂಟೆ ಕಾಲದ ಪ್ರಯಾಣ. ಮುರಳಿ ಕಾರೋಡಿಸುತ್ತಿದ್ದ. ಅವನ ಪಕ್ಕದಲ್ಲಿ ಶ್ರೀನಿವಾಸಾಚಾರ್ಯರು. ಜೋತ್ಸ್ನ, ಅವರಮ್ಮ ಇನೋವಾದ ಮಧ್ಯದಲ್ಲಿ ಕೂತರೆ, ರಾಘವ ಅವನ ಹೆಂಡತಿ ಹಿಂದೆ ಕೂತರು. ದಾರಿಯುದ್ದಕ್ಕೂ ಅವರೆಲ್ಲಾ ಮಾತಾಡಿಕೊಂಡು ಬರುತ್ತಿದ್ದರೂ ಇವರಿಗೆ ಒಂದಕ್ಷರವೂ ಕೇಳುತ್ತಿರಲಿಲ್ಲ. ತನ್ನ ಮುದ್ದು ಮೊಮ್ಮಗ ಹೀಗೆ ಮಾಡಿದನಲ್ಲಾ ಎಂದು ಮನಸ್ಸು ಕೊರಗುತ್ತಿತ್ತು. 'ಅಪ್ಪಾ ಕಿವಿ ಕೇಳಿಸೋ ಮಿಶಿನ್ ಹಾಕ್ಕೋಬಾರದೆ?' ಎಂದು ಮಗಳು ಕೇಳಿದ್ದನ್ನು ಬಿಟ್ಟರೆ, ಬೇರೆ ಯಾರೂ ಇನ್ನೇನನ್ನೂ ಮಾತಾಡಿಸಲಿಲ್ಲ. ಆ ಮಿಶಿನ್ ಹಾಕಿಕೊಂಡರೆ ಇನ್ನೂ ಹಿಂಸೆ. ಎಲ್ಲಾ ಗೊಜ ಗೊಜ ಎಂದು ಕೇಳುವುದು, ತಲೆನೋವು. ಇವರು ಉತ್ತರ ಕೊಡಲಿಲ್ಲ. ಮಾತಾಡಿದರೆ ತಮ್ಮ ಲಹರಿಗೆ ತೊಡಕಾಗುತ್ತದೆಯೆಂದು ಅವಳು ಹೇಳಿದ್ದು ಕೇಳಲೇ ಇಲ್ಲ ಅನ್ನುವಂತೆ ಇದ್ದುಬಿಟ್ಟರು. ಅವನು ಮೊದಮೊದಲು ಮನೆಯ ದಪ್ಪನೆಯ ಹೊಸ್ತಿಲನ್ನು ತನ್ನ ಅಂಬೆಗಾಲಲ್ಲಿ ದಾಟಿ ಹೊರಗಡೆಯ ಕಲ್ಲು ಮೆಟ್ಟಿಲಮೇಲೆ ಉರುಳಿಕೊಂಡು ಬಿದ್ದಾಗ ಒಂದು ಚೂರೂ ಅಳದೆ, ಬಿದ್ದದ್ದ ಬಿದ್ದದ್ದ ಅನ್ನುತ್ತಾ ಸುಮ್ಮನೆ ಕೂತಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಏನೋ ಕಸ ಕಡ್ಡಿಯನ್ನೋ ‌ಬಾಯಿಗೆ ತುರುಕಿಕೊಂಡು ಅವನ ಅಜ್ಜಿಯನ್ನು ಮನೆ, ಜಗುಲಿ ಊರೆಲ್ಲಾ ಓಡಾಡಿಸಲಿಲ್ಲವೇ? ಮನೆಯ ತುಂಬಾ ತಆಆಆತ ತಾಆಆಆತ ಅಂತ ರಾಗವಾಗಿ ಹೇಳುತ್ತಾ ತನ್ನ ಹಿಂದೆ ಮುಂದೆ ಒಡಾಡಿದ್ದೇ ಓಡಾಡಿದ್ದು, ತೋಟಕ್ಕೂ ಹೋಗಲು ಬಿಡದಂತೆ. ಸ್ಕೂಲಿನ ರಜಾ ದಿನಗಳಲ್ಲಿ ನಾನು ಅವನು ಸುತ್ತದ ಜಾಗಗಳಿಲ್ಲ. ಅವನಿಗೆ ತಾನೇ ಅಲ್ಲವೇ ಬ್ರಹ್ಮೋಪದೇಶ ಮಾಡಿದ್ದು, ಎಂದುಕೊಂಡರು.

ಕಾಲೇಜು ಸೇರುವವರೆಗೂ ಬಿಡದೆ ಅಗ್ನಿಕಾರ್ಯ ಮಾಡಿದ ಶ್ರೀನಿವಾಸ ಆಮೇಲೆ ಕೆಲವು ವರ್ಷ ಪರಿಸರ, ಪ್ರಾಣಿ, ಪಕ್ಷಿ, ಗಿಡ-ಮರ, ಸಮಾನತೆ ಅಂತೆಲ್ಲಾ ಓಡಾಡಿಕೊಂಡಿದ್ದ. 'ತಾತ ನೀನೂ ಔಪಾಸನ ಹೋಮ ಮಾಡೋದನ್ನ ನಿಲ್ಲಿಸು, ಇಷ್ಟು ವರ್ಷ ನೀನು ಅಗ್ನಿಕಾರ್ಯಕ್ಕೆ, ಔಪಾಸನ ಹೋಮಕ್ಕೆ ಅಂತ ಬಳಸಿದ ಚಕ್ಕೆ, ತುಪ್ಪ, ಅಕ್ಕಿ, ಬೆರಣಿಯ ದುಡ್ಡಲ್ಲಿ ಎಷ್ಟು ಬಡ ಮಕ್ಕಳ ಹೊಟ್ಟೆ ತುಂಬುತ್ತಿತ್ತು. ಹೊಟ್ಟೆಗೆ ತಿನ್ನೋದನ್ನ ಹೋಮ ಹವನ ಅಂತ ಬೆಂಕಿಗೆ ಹಾಕೋ ದೌಲತ್ತು ಸರಿ ಅಲ್ಲ. ಹೆಂಗಸರಿಗ್ಯಾಕೆ, ಇತರೆ ವರ್ಗದವರಿಗ್ಯಾಕೆ ಉಪನಯನ ಸಂಸ್ಕಾರ ಮಾಡೋದಿಲ್ಲ? ಇದು ಪುರುಷಪ್ರಧಾನ, ಪುರೋಹಿತಶಾಹಿ ವ್ಯವಸ್ಥೆಯು ಹಾಕಿದ ಕಟ್ಟುಪಾಡು' ಅಂತ ಮೊಮ್ಮಗ ವಾದಿಸಿದರೆ, 'ಪ್ರಾಚೀನ ಕಾಲದಲ್ಲಿ ಎಲ್ಲಾ ವರ್ಣದವರಿಗೂ, ಹೆಣ್ಣುಮಕ್ಕಳಿಗೂ ಕೂಡ ಉಪನಯನ ಸಂಸ್ಕಾರ ಮಾಡುತ್ತಿದ್ದರು. ಉಪನಯನವಾದವರು ಪಾಲಿಸಬೇಕಾದ ನಿಯಮಗಳಿವೆ, ಆ ನಿಯಮಗಳನ್ನು ಪಾಲಿಸಲಾಗದ ಯಾರೂ ಆ ಸಂಸ್ಕಾರಕ್ಕೆ ಯೋಗ್ಯರಲ್ಲ. ನೀನು ಪಾಲಿಸಲು ಯೋಗ್ಯನೋ ಅಯೋಗ್ಯನೋ ನೀನೇ ನಿರ್ಧಾರ ಮಾಡಿಕೋ. ನಾನು ಪುರೋಹಿತ ಶಾಹಿಯೂ ಅಲ್ಲ, ಪುರುಷರೇ ಎಲ್ಲದರಲ್ಲೂ ಮೇಲು ಅನ್ನುವವನಲ್ಲ. ಏನು ಬೇಕಾದರೂ ಪಾಲಿಸುವ- ಬಿಡುವ ಹಕ್ಕು ನಿನಗಿದೆ. ತಾತನೊಬ್ಬ ಮೊಮ್ಮಗ ಹೀಗೆ ಮಾಡಿದರೆ ಅವನಿಗೆ ಶ್ರೇಯಸ್ಸು ಅಂತ ಯೋಚಿಸುತ್ತಾನೆ. ಆ ರೀತಿ ಮಾಡಿಸುತ್ತಾನೆ. ಅಷ್ಟೇ. ದೊಡ್ಡವನಾದೆ ನೀನು. ನಿನ್ನ ಮನಸ್ಸಿಗೆ ಬಂದದ್ದು ಮಾಡು.' ಎಂದು ತಾವೂ ವಾದ ಮಾಡಿ ಕೋಪಿಸಿಕೊಂಡು ಊರಿಗೆ ಬಂದರೆ, ಮಾರನೆಯ ದಿನವೇ ಅವನೇ ಮಾತಾಡಿಸಿಕೊಂಡು ಬಂದಿದ್ದನಲ್ಲಾ. ಚಿನ್ನದಂಥಾ ಹುಡುಗ. ಮನಸ್ಸಿಗೆ ಸರಿ ಅನ್ನಿಸದಿದ್ದರೆ ಜಪ್ಪಯ್ಯಾ ಅಂದರೂ ಏನನ್ನೂ ಮಾಡುವವನಲ್ಲ. ಆದರೂ ಚಿನ್ನದಂಥ ಹುಡುಗ. ತನಗೆ ಮೂರು ಮಕ್ಕಳಿದ್ದರೂ ಒಬ್ಬನೇ ಮೊಮ್ಮಗ. ಮುರಳಿ ಮದುವೆಯಾಗಲಿಲ್ಲ, ಜ್ಯೋತ್ಸ್ನಾಗೆ ಮಕ್ಕಳಾಗಲಿಲ್ಲ. ರಾಘವ ಮತ್ತೊಂದು ಮಗು ಮಾಡಿಕೊಳ್ಳಲಿಲ್ಲ. ಇವನಿಗೇ ಎಲ್ಲಾ ಪ್ರೀತಿ ಸುರಿಸಿದೆ. ಎಷ್ಟು ಮುಚ್ಚಟೆಯಿಂದ ನೋಡಿಕೊಂಡೆ. ಈಗ ಈ ಥರ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ. ಮೇಷ್ಟ್ರು, 'ನಿಮ್ಮ ಮೊಮ್ಮಗ ಹೀಗೆ ಮಾಡಿದ, ನಮ್ಮ ಹುಡುಗಿಯ ಗತಿ ಏನು?' ಅಂದರೆ ನಾನೇನು ಹೇಳಲಿ ಅಂದುಕೊಂಡು ಕೂತಲ್ಲೇ ತಲೆ ತಗ್ಗಿಸಿದರು.

ತಾತನಿಗೆ ಏನು ಹೇಳಲಿ. ನಾನು ಸರಿಯಾದ ಕಾರಣ ಕೊಡುವವರೆಗೂ ಬಿಡುವವರಲ್ಲ ತಾತ. ಇಲ್ಲೇ ಕೂತು ಬಿಡುತ್ತಾರೆ. ನಾನು ಸಾಯೋ ಕಾಲದಲ್ಲಿ ಹೀಗೆ ಮಾಡ್ತಿಯಲ್ಲೋ ಅನ್ನುತ್ತಾರೆ. ಬೋಧನೆ ಮಾಡುತ್ತಾರೆ. ತಾತನ ಜೊತೆಗಿನ ಮೊದಲ ನೆನಪು ಮನಸ್ಸು ಹಿಂಡಿತು. ಅಷ್ಟು ಅಗಲವಾದ ಕಾಲುವೆಯ ಹರಿವ ತಿಳಿ‌ನೀರಲ್ಲೋ, ಇಲ್ಲಾ ತೋಟದ ಬಾವಿಯ ಹಸಿರು ನೀರಿನಲ್ಲೋ ಈಜಾಡಿ ವಾಪಸ್ಸು ಮನೆಗೆ ಬರುವಾಗ ಸಿಗುವ ಪನ್ನೇರಳೆ ಗಿಡದಿಂದ ತಪ್ಪದೆ ಹಣ್ಣು ಕಿತ್ತು ಕೊಡುತ್ತಿದ್ದರು ತಾತ. ಆಗ ಆ ಹಣ್ಣು ಅದೆಷ್ಟು ರುಚಿ ಅನ್ನಿಸೋದು. ತಾತನಿಗೆ ನೀರೆಂದರೆ ಪ್ರಾಣ. ಸಮುದ್ರವೆಂದರಂತೂ ಮುಗಿದೇ ಹೋಯಿತು. ವರ್ಷಕ್ಕೆ ಒಂದು ಸಾಲಕ್ಕಾದರೂ ಯಾವುದಾದರೂ ಸಮುದ್ರ ಹುಡುಕಿಕೊಂಡು ಹೊರಟುಬಿಡುತ್ತಿದ್ದರು. ಬಾವಿಯಲ್ಲಿ ಅಂಗಾತ ಈಜುವಾಗ ಬಾವಿಯ ಸುತ್ತ ಎತ್ತರಕ್ಕೆ ಬೆಳದು ಬಾವಿಗೆ ರಕ್ಷೆಯಂತೆ ನಿಂತಿದ್ದ ತೆಂಗಿನ ಮರದ ಗರಿ ತೂಗುವುದನ್ನು ನೋಡಿ ಮೈ ಮರೆಯುತ್ತಿದ್ದುದನ್ನು ನೆನೆದರೆ ಈಗಲೂ ಮನಸ್ಸು ಉಲ್ಲಾಸಗೊಳ್ಳುತ್ತದೆ. ಎಷ್ಟು ಯಂಗ್ ಆಗಿದ್ದರು ತಾತ. ಮನುಷ್ಯ ಸಂಭಂಧಗಳು ಭಾವನೆಗಳು ಕಣ್ಣಿಗೆ ಕಾಣುವಷ್ಟು ಸುಲಭದ್ದಲ್ಲ ಅನ್ನೋದನ್ನ ತಾತ ಎಷ್ಟು ಚೆನ್ನಾಗಿ ಅರಿತಿದ್ದರು. ಊರಿನಲ್ಲಿ ಜಗಲಿ ಕಟ್ಟೆಯ ಮೇಲೆ ಕೂತು ಊರಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ತಾತ, ಏನೋ ಒಂದು ವ್ಯಾಜ್ಯವೋ, ವಿಶೇಷ ಘಟನೆಯೋ ನಡೆದಾಗ, ಯಾರು ಬಂದು ಹೇಳಿದರೂ, ಹತ್ತನೆಯ ಸರತಿ ಆ ವಿಷಯದ ಬಗ್ಗೆ ಕೇಳುತ್ತಿದ್ದರೂ, ಹೊಸದಾಗಿ ಕೇಳುವಂತೆ ಕೇಳುತ್ತಿದ್ದರು. 'ನಿಂಗೆ ಏನಾಯ್ತು ಅಂತ ಗೊತ್ತಿತ್ತಲ್ಲ ತಾತ. ಯಾಕೆ ಮತ್ತೆ ಮತ್ತೆ ಯಾರೇ ಹೇಳಿದರೂ ಹೊಸದಾಗಿ ಕೇಳ್ತೀಯ?' ಅಂದಿದ್ದಕ್ಕೆ, 'ನೋಡು ಒಂದು ಘಟನೆಗೆ ಬೇಕಾದಷ್ಟು ಆಯಾಮಗಳಿರುತ್ತವೆ. ಯಾರೇ ಏನೇ ಹೇಳಿದರೂ ಅವರ ಮೂಗಿನ ನೇರಕ್ಕೆ ಹೇಳುತ್ತಾರೇ ವಿನಹ ನಿಜವಾಗಲೂ ಏನು ನಡೆಯಿತೆಂದು ವಿವೇಚಿಸುವವರು ಕಡಿಮೆ. ಅದಲ್ಲದೆ ಮನುಷ್ಯ ಯಾವ್ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸುತ್ತಾನೆ? ಅವನ ಮನಸ್ಸಿನ ಆಗುಹೋಗುಗಳೇನು ಎಂದು ತಿಳಿದುಕೊಳ್ಳುವುದರಲ್ಲಿ ನನಗೆ ಮೊದಲಿನಂದಲೂ ಆಸಕ್ತಿ,' ಅಂದಿದ್ದರು. ಆಗ ತಾತನ ನಡೆ ನನಗೆ ವಿಚಿತ್ರ ಅನ್ನಿಸಿದ್ದರೂ ಆಮೇಲೆ ತಾತನೊಳಗೆ ಒಬ್ಬ ಸೈಕಾಲಜಿಸ್ಟ್ ಇದ್ದ ಅನ್ನಿಸುತ್ತಿತ್ತು. ನಾನು ಸ್ಕೂಲು ಸೇರಿದಮೇಲೆ ಪ್ರತೀ ವಾರ ಅವರೂ ಅಜ್ಜಿಯೂ ತನ್ನ ಜೊತೆಯಿರಲು ನುಗ್ಗೇಹಳ್ಳಿಯಿಂದ ಬಂದುಬಿಡುತ್ತಿದ್ದರಲ್ಲ. ಎಲ್ಲರ ವಿರೋಧದ ನಡುವೆಯೂ ನಾಯಿ ಮರಿ ತಂದು ಕೊಟ್ಟಿದ್ದ ತಾತ, ಮೊಮ್ಮಗನ ಖುಷಿಗೆ ಏನು ಬೇಕಾದರೂ ಮಾಡುತ್ತಿದ್ದರು. ಅವರು ತಮ್ಮ ಗಟ್ಟಿ ಧ್ವನಿಯಲ್ಲಿ 'ಯಗ್ನೋಪವೀತಂ ಪರಮಮಂ ಪವಿತ್ರಂ ಪ್ರಜಾ ಪತೇ..' ಎಂದು ಹೇಳುತ್ತಾ ನನಗೆ ಜನಿವಾರ ಹಾಕಿಸಿದ್ದು, ಬ್ರಹ್ಮೋಪದೇಶ ಮಾಡಿದ್ದು, ಎಲ್ಲವೂ ಕಿವಿಯಲ್ಲಿ ಇನ್ನೂ ಝೇಂಕರಿಸಿದಂತಾಗುತ್ತದೆ. 'ಕೆಲಸ ಸಿಕ್ಕಿದೆ ತಾತ.' ಎಂದು ಫೊನು ಮಾಡಿದ ನಾಲ್ಕು ಘಂಟೆಯ ಒಳಗೆ ನನ್ನ ನೋಡಲು ಬಂದಿದ್ದರಲ್ಲಾ. ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ತಾತನ ನೆನಪು ಹರಡಿದೆ. ತನ್ನ ಮದುವೆಯಲ್ಲಿ ತಾತನಷ್ಟು ಸಂಭ್ರಮಿಸಿದವರು ಮತ್ಯಾರೂ ಇಲ್ಲವೇನೋ. ಅವರು ತೋರಿಸಿದ ಹುಡುಗಿಯನ್ನೇ ಮದುವೆಯಾದೆ ಅನ್ನೋ ಹೆಮ್ಮೆ ಬೇರೆ. ಶಾಲಿನಿಯೆಂದರೆ ಅಚ್ಚುಮೆಚ್ಚು. 'ನನಗೊಬ್ಬನಿಗೇ ಅಲ್ಲ ಎಲ್ಲರಿಗೂ, ಎಲ್ಲರಿಗೂ ಮೋಸ ಮಾಡಿದಳು.' ಅಂದುಕೊಂಡ.

ಬೆಂಗಳೂರಿನಿಂದ ವಾಪಾಸ್ಸು ಬಂದ ಶ್ರೀನಿವಾಸಾಚಾರ್ಯರು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದರು. ಮೊದಲಿನಂತೆ ಜಗಲಿಯಮೇಲೆ ಕೂತು ಊರವರನ್ನು ಮಾತಾಡಿಸುವ, ಊರ ಹೊರಗಿನವರೆಗೂ ಒಂದು ಸುತ್ತು ಹೋಗಿ ಬರುವ, ಉತ್ಸಾಹ ಇಂಗಿಹೋಗಿತ್ತು. ಊರಿಗೆ ಬಂದು ನಾಲೈದು ದಿನವಾದರೂ ಶ್ರೀನಿವಾಸಾಚಾರ್ಯರು ತೋಟದ ಕಡೆ ಬಾರದಿದ್ದರಿಂದ, ಅವರನ್ನು ಹುಡುಕಿಕೊಂಡು ಬಂದ ಗೋಪಿಗೆ, 'ಆರೋಗ್ಯವಿಲ್ಲ ಮಗು, ಸ್ವಲ್ಪ ಸುಧಾರಿಸಿದ ಮೇಲೆ ನಾನೇ ನಿನ್ನ ಬಂದು ಕಾಣುತ್ತೇನೆ.' ಎಂದು ಕಳುಹಿಸಿದ್ದರು. ಗಟ್ಟಿಯಾಗಿ, ಚನ್ನಾಗೇ ಕೇಳುವಂತೆ 'ಗೋಪಿಗೆ, ಶ್ರೀನಿವಾಸನ ವಿಷಯ ಏನೂ ಹೇಳಬೇಡಿ.' ಎಂದು ಭಾಗಮ್ಮ ತಾಕೀತು ಮಾಡಿದ್ದರು. ನನ್ನ ಮೊಮ್ಮಗ ಹೀಗೆ ಮಾಡಿದ ಅಂತ ಹೇಳಿಕೊಂಡು ಬರಲು ಸಾಧ್ಯವೇ?! ಎಲ್ಲಕ್ಕಿಂತ ಅವರನ್ನು ಘಾಸಿಗೊಳಿಸಿದ್ದು ಮೊಮ್ಮಗ ನಡೆದುಕೊಂಡ ರೀತಿ. ತಾವು ಏನು ಕೇಳಿದರೂ, ಒಂದೇ ಒಂದು ಉತ್ತರ ಕೊಡದೆ ಸುಮ್ಮನೆ ಕೂತಿದ್ದನಲ್ಲ. ಎಷ್ಟು ಬಿಡಿಸಿ ಕೇಳಿದರೂ ಉಹು ತುಟುಕ್ ಪಿಟಕ್ ಅನ್ನಲಿಲ್ಲ. ನನ್ನ ಕೇಳಬೇಡ, ನಾ ಹೇಳಲ್ಲ ಅನ್ನಲಿಲ್ಲ, ಆದರೂ ತುಟಿ ಬಿಚ್ಚಲಿಲ್ಲ. ಸುಮ್ಮನೆ ತಲೆ ಬಗ್ಗಿಸಿ ಕೂತವನು ಅತ್ತು ಬಿಟ್ಟ. ಗಂಡು ಹುಡುಗ ಅಳುವಷ್ಟು ಬೇಜಾರಾಗಿದ್ದಾನೆ. ಚಿಕ್ಕವಯಸ್ಸಿನಲ್ಲಿ ಬಿದ್ದು ಪೆಟ್ಟುಮಾಡಿಕೊಂಡಾಗಲೋ, ಅವನಮ್ಮ ಕೇಳಿದ್ದು ಕೊಡಿಸದೆ ಸತಾಯಿಸಿದಾಗಲೋ ಅಳುತ್ತಿದ್ದ. ಅವನು ದೊಡ್ಡವನಾದ ಮೇಲೆ ಅತ್ತದ್ದನ್ನು ತಾವು ನೋಡಿಯೇ ಇಲ್ಲ. ಏನಾಯಿತೋ ಏನೋ. ಸಾಯೋ ಮುಂಚೆ ನನ್ನ ನೆಮ್ಮದಿ ಕಳೆಯಿತು. ಎಂದುಕೊಂಡರು.

ಈ ಘಟನೆಯಾಗಿ ಮೂರು ತಿಂಗಳು ಕಳೆದಿದೆ. ಶ್ರೀನಿವಾಸಾಚಾರ್ಯರು ಮೊದಲಿನಂತೆ ತೋಟದಕಡೆಗೆ ಹೋಗಿ ಬರುತ್ತಾರೆ. ಆದರೆ ಯಾರನ್ನೂ ತಾವಾಗಿಯೇ ಮಾತಾಡಿಸುವುದಿಲ್ಲ. ಬೇರೆಯವರು ಮಾತಾಡಿಸಿದರೂ, ಸಾಧ್ಯವಾದರೆ ತಮಗೆ ಕೇಳಲೇ ಇಲ್ಲವೇನೋ ಎನ್ನುವಂತಿರುತ್ತಾರೆ. ಆದರೆ ಅವತ್ತು ಗೋಪಿ ಬಿಡಲಿಲ್ಲ. 'ಮನೆಗೆ ಬನ್ನಿ ನೀವು.' ಎಂದು ಬಲವಂತ ಮಾಡಿ ಎಳೆದುಕೊಂಡೇ ಹೋದ. 'ನಿಮ್ಮ ಮೊಮ್ಮಗನ ವಿಷಯ ಗೊತ್ತಾಯಿತು.' ಅಂದ. 'ಊರಿನವರಿಗೆಲ್ಲ ಗೊತ್ತು.' ಎಂದೂ ಸೇರಿಸಿದ. ಶ್ರೀನಿವಾಸಾಚಾರ್ಯರ ಮುಖ, ಮನಸ್ಸು ಎರಡೂ ಚಿಕ್ಕದಾಯಿತು. ನಿಟ್ಟುಸಿರಿಟ್ಟರು. 'ಸಾಯೋ ಕಾಲಕ್ಕೆ ಶ್ರೀನಿವಾಸಾಚಾರ್ಯರ ಮೊಮ್ಮಗ ಹೀಗೆ ಮಾಡಿದ ಅನ್ನೋ ಮಾತು ಕೇಳುವಂತಾಯಿತು.' ಅಂದರು. ಗೋಪಿಗೆ ಕಸಿವಿಸಿಯಾಯಿತು. 'ನಿಮ್ಮ ಮೊಮ್ಮಗನದೇನು ತಪ್ಪು ಪಾಪ. ಆ ಥರದ ಹುಡುಗಿಯರಿರುತ್ತಾರೆ ಅಂತ ನನಗೇ ತಿಳಿದಿರಲಿಲ್ಲ.' ಅಂದ. ಶ್ರೀನಿವಾಸಾಚಾರ್ಯರಿಗೆ ಏನೊಂದೂ ಅರ್ಥವಾಗಲಿಲ್ಲ. 'ಅಯ್ಯೋ ನಿಮಗೇ ತಿಳಿದಿಲ್ವೇ? ನಿಮ್ಮ ಮೊಮ್ಮಗನದೇನೂ ತಪ್ಪಿಲ್ಲ. ಆ ಹುಡುಗಿ ಈಗ ಬೇರೆ ಹುಡುಗಿಯ ಜೊತೆ ಸಂಸಾರ ಮಾಡಿಕೊಂಡಿದೆಯಂತೆ. 'ನನಗೆ ನಾನೀಥರ ಅಂತ ಗೊತ್ತಿರಲಿಲ್ಲ ಈಗ ಗೊತ್ತಾಗಿದೆ ಡೈವೋರ್ಸ್ ಕೊಡು ಅಂದಳಂತೆ.' ಅದಕ್ಕೇ ನಿಮ್ಮ ಮೊಮ್ಮಗ ಬೇರೆಯಾಗಿದ್ದಾನೆ. ನಿಮ್ಮ ಬೀಗರು ಮಗಳಿಗೆ, 'ನನಗೂ ನಿನಗೂ ಸಂಬಂಧವಿಲ್ಲ.' ಅಂತ ಎಳ್ಳೂ ನೀರು ಬಿಟ್ಟು ಬಂದರಂತೆ.' ಅಂದ. ಶ್ರೀನಿವಾಸಾಚಾರ್ಯರಿಗೆ ಮಾತನಾಡಲು ತಿಳಿಯಲಿಲ್ಲ. ಅಸಲಿಗೆ ಅವರಿಗೆ ಅರ್ಥವೇ ಆಗಲಿಲ್ಲ. ಮೊಮ್ಮಗನ ತಪ್ಪೇನು ಇಲ್ಲವೆನ್ನುವುದು ಖಾತ್ರಿಯಾಯಿತು. ಮನೆಗೆ ಬಂದವರು ಭಾಗಮ್ಮನಿಗೆ ನಾಳೆ ಬೆಂಗಳೂರಿಗೆ ಹೊರಡಬೇಕು ಕಾರಿನವನಿಗೆ ಪೋನ್ ಮಾಡು ಅಂದರು.

"ನನಗೆ ನಾನು ಮೋಸ ಮಾಡಿಕೊಂಡೆ ನಿನಗೂ ಮೋಸ ಮಾಡಿದೆ. ನನ್ನ ದೇಹದ ಬಗ್ಗೆ, ನನ್ನ ಸೆಕ್ಷುಯಾಲಿಟಿಯ ಬಗ್ಗೆ, ನನಗೇ ಅರ್ಥವಾಗಿರಲಿಲ್ಲ. ತಪ್ಪೆಲ್ಲಾ ನನ್ನದು. ಇಷ್ಟು ವರ್ಷ ಸುಳ್ಳಿನ ಜೀವನ ನಡೆಸಿದ್ದೆ. ಇಂಚರ ಸಿಗದೇ ಹೋಗಿದ್ದರೆ ನನ್ನ ಜೀವನ ಹೀಗೇ ಸಂತೋಷವಿಲ್ಲದೆ, ಅರ್ಥವಿಲ್ಲದ ಗೊಂದಲದಲ್ಲಿ ಕಳೆದು ಹೋಗುತ್ತಿತ್ತೇನೋ. ಅವಳು ನನ್ನ ಕಣ್ಣು ಮನಸ್ಸು ಎರಡೂ ತೆರೆಸಿದ್ದಾಳೆ. ನಾನೂ ಅವಳೂ ಜೊತೆಗೆ ಬದುಕದೆ ಇದ್ದರೆ ಬದುಕೇ ವ್ಯರ್ಥ ಅನ್ನುವಷ್ಟು ಸ್ಥಿತಿ ತಲುಪಿದ್ದೇವೆ. ಪ್ರೀತಿ ಅಂದರೇನು ಅಂತ ಈಗ ಅರ್ಥವಾಗಿದೆ, ಇಲ್ಲ ಅವಳು ಅರ್ಥ ಮಾಡಿಸಿದ್ದಾಳೆ. ನಾನ್ಯಾರೆಂದು ಕಂಡುಕೊಳ್ಳುವ ಪ್ರಯತ್ನದಲ್ಲಿ, ನಿನಗೆ ಮೋಸವಾಗಿದೆ. ಕ್ಷಮಿಸಿಬಿಡು." ಶಾಲಿನಿ

ಎಂಬ ಮೈಲ್ ಬಂದು ಬಹಳ ದಿನಗಳಾದರೂ ಶ್ರೀನಿವಾಸ ದಿನಕ್ಕೊಂದು ಬಾರಿ ಹೊಸದೆಂಬತೆ ಓದಿಕೊಳ್ಳುತ್ತಿದ್ದ. ದಿನದಿನಕ್ಕೆ ಅವನ ಮನಸ್ಸು ವಾಸ್ತವಕ್ಕೆ ಹೊಂದಿಕೊಳ್ಳುತ್ತಿತ್ತು. ನಮ್ಮ ಸಮಾಜ ಎಲ್ಲಾ ಥರಹದ ಸೆಕ್ಷುಯಲ್ ಓರಿಯಂಟೇಷನ್ ಇರುವವರನ್ನು ಒಪ್ಪಿಕೊಳ್ಳುವ ವರೆಗೂ ನಮ್ಮಂಥವರಿಗೆ ಅನ್ಯಾಯವಾಗುತ್ತಲೇ ಇರುತ್ತದೆ. ಹಿಂದೆ ಪ್ರೀತಿಸಿದವರು ಬೇರೆ ಜಾತಿಯ ಧರ್ಮದ ಜನರಾಗಿದ್ದರೆ ಸಮಾಜದ ಭಯದಿಂದ ತೊಳಲಾಡಬೇಕಿತ್ತು. ಈಗ ಸಲಿಂಗಿಯಾದರೆ ಸಮಾಜಕ್ಕೆ ಹೆದರಿಕೊಳ್ಳಬೇಕು. ಇಂಥಹ ಮದುವೆಗಳಿಂದ ತೊಳಲುವ ಜನರೆಷ್ಟೋ ಅಂದುಕೊಂಡ.

ಅವತ್ತು ಭಾನುವಾರ. ಶ್ರೀನಿವಾಸನ ಮನೆಯ ಕಾಲಿಂಗ್ ಬೆಲ್ ಸದ್ದಾದಾಗ ಬಾಗಿಲು ತೆರೆದವಳು ಆರ್ನವಿ. ("ಆ್ಯನ್" ಎನ್ನುವ ಹೆಸರನ್ನು ಬದಲಿಸಿ "ನೀನು ಸಮುದ್ರದಂಥವಳು ಅದಕ್ಕೆ ಆರ್ನವಿ ಅನ್ನುತ್ತೇನೆ ಎಂದಿದ್ದ ಶ್ರೀನಿವಾಸ." ಅವಳಿಗೂ ಆ ಹೆಸರೇ ಇಷ್ಟವಾಗಿಹೋಗಿತ್ತು.)

ಬಾಗಿಲು ತೆರೆದ ತಕ್ಷಣ ಶ್ರೀನಿವಾಸನನ್ನು ತಬ್ಬಿಕೊಂಡು ಕಂದಾ ಅನ್ನಬೇಕು ಅಂದುಕೊಂಡವರಿಗೆ ಕಂಡದ್ದು, ಚಿಕ್ಕ ಚಡ್ಡಿ, ಸೊಂಟದಿಂದ ಮೇಲಕ್ಕಿರುವ ಅಂಗಿ ಹಾಕಿಕೊಂಡಿದ್ದ ಅಮೇರಿಕನ್ ಹುಡುಗಿ. ಕಕ್ಕಾಬಿಕ್ಕಿಯಾಗಿದ್ದ ವೃದ್ಧರಿಬ್ಬರನ್ನೂ ಒಳಗೆ ಕರೆದವಳು 'ಶ್ರೀನಿ ಸಂಧ್ಯಾವಂದನೆ ಮಾಡ್ತಿದಾನೆ, ನಾನು ಹೇಳಿ ಬರ್ತಿನಿ, ನಿಮ್ಮ ತಾತ ಅಜ್ಜಿ ಬಂದಿದಾರೆ ಅಂತ. ಬನ್ನಿ ಒಳಗೆ. ನಿಮ್ಮ‌ ಬಗ್ಗೆ ತುಂಬಾ ಹೇಳಿದಾನೆ ಶ್ರೀನಿ. ನನ್ನ ಹೆಸರು ಆರ್ನವಿ. ಅಂದಳು ಶುದ್ಧ ಕನ್ನಡದಲ್ಲಿ. ಅವಳ ಕೊರಳಲ್ಲಿ ಮಾಂಗಲ್ಯ ಕಂಡಿತು. ಶ್ರೀನಿವಾಸಾಚಾರ್ಯರು ಭಾಗಮ್ಮನ ಕಡೆ ನೋಡಿದರು. ಭಾಗಮ್ಮ ತಮಗಾದ ಆಶ್ಚರ್ಯವನ್ನೂ ಮೀರಿ ಬೆಚ್ಚಗಿನ ನಗೆ ನಕ್ಕು, ಶ್ರೀನಿವಾಸಾಚಾರ್ಯರ ಕೈಹಿಡಿದುಕೊಂಡು ಒಳನಡೆದರು. ಆ ಹುಡುಗಿ ಹೇಳಿದ್ದು ಏನೂ ಕೇಳದಿದ್ದರೂ, ಶ್ರೀನಿವಾಸಾಚಾರ್ಯರಿಗೆ ಜೀವನದಲ್ಲಿ ನೋಡಬೇಕಾದ್ದನ್ನೆಲ್ಲವನ್ನೂ ನೋಡಿಯಾಗಿದೆ ಎನ್ನುವ ಭಾವ ಆವರಿಸಿಕೊಂಡಿತು. ಬಿಳಿ ಹುಡುಗಿ ಹಾಲು ಹಾಕದ ಕರೀ ಕಾಫಿ ತಂದು ಕೊಟ್ಟಳು. ಸಂಧ್ಯಾವಂದನೆ ಮುಗಿಸಿ ಬಂದ ಶ್ರೀನಿವಾಸ ತಾತ ಅಜ್ಜಿಗೆ ನಮಸ್ಕರಿಸಿ ಅಭಿವಾದನೆ ಹೇಳಿದ. ಆಶೀರ್ವಾದ ಮಾಡಿದ ಮೇಲೆ ತಾತ ನಗುತ್ತಾ, 'ಈ ಹುಡುಗಿಗೆ ಮೊಸರನ್ನ ಕಲಸೋಕ್ಕೆ ಬರುತ್ತೇನೋ?' ಎಂದು ಕೇಳಿದರು. ಚಿಕ್ಕಮಗುವಿನಂತೆ ತಾತನ ಕಾಲು ತಬ್ಬಿಕೊಂಡ ಶ್ರೀನಿವಾಸ "ತಾತಾ ಇವಳು ವೀಗನ್ ಹಾಲು ತುಪ್ಪ ಮೊಸರುಗಳನ್ನೆಲ್ಲಾ ತಿನ್ನೋಲ್ಲಾ," ಎನ್ನುತ್ತಾ ಹುಳ್ಳನೆ ನಕ್ಕ.

19th Sept, 2017

Wednesday, July 13, 2011

ನೆನಪಿಗೂ ನೆರಳ ಬಣ್ಣ

ತೊಂಬತ್ತು ವರ್ಷವಾದಮೇಲೂ ಬರೆಯುವ ಆಸಕ್ತಿ ಇರಲು ಸಾಧ್ಯವೇ? ಜಗತ್ತಿನ ದೊಡ್ಡ ದೊಡ್ಡ ಲೇಖಕರೆಲ್ಲಾ ಸಾಯುವವರೆಗೂ ಬರೆಯುತ್ತಿದ್ದರೇ? ಯಾವ ಲೇಖಕನ ಹೆಸರೂ ನೆನಪಿಗೆ ಬರುತ್ತಿಲ್ಲ. ತುಂಬ ಲೇಖಕರನ್ನು ಓದಿದ್ದೇನೆ ಅನ್ನುವುದಂತೂ ನಿಜ. ನಾನು ಸಣ್ಣವಯಸ್ಸಿನಲ್ಲಿ ಇಷ್ಟಪಟ್ಟು ಓದುತ್ತಿದ್ದ ಲೇಖಕ ಅದ್ಯಾರದು? ದಕ್ಷಿಣ ಕನ್ನಡದವರು ಏನೋ ಅಡಿಗ? ಯಾವ ಅಡಿಗ ಮರೆತೇ ಹೋಯಿತಲ್ಲ? ಯಾರನ್ನಾದರೂ ಕೇಳಬೇಕು, ಮೊಮ್ಮೊಗು ಅಗಸ್ತ್ಯನೂ ತುಂಬ ಓದುತ್ತಾನೆ. ’ಅರವಿಂದ ಅಡಿಗ ಇರಬೇಕು ಅಜ್ಜಿ’ ಅಂದ, ಆದರೆ ಅವನಿಗೆ ಕನ್ನಡದ ಲೇಖಕರು ಗೊತ್ತಿರುತ್ತಾರ? ಹೆಸರು ಗೊತ್ತಿಲ್ಲದೇ ಇರುತ್ತದೆಯೇ? ಅರವಿಂದ ಅಡಿಗನೇ ಇರಬೇಕು. ನಾನು ಇಷ್ಟಪಟ್ಟು ಓದುತ್ತಿದ್ದ ಲೇಖಕರ ಹೆಸರೇ ಗೊತ್ತಿಲದ ಮೇಲೆ ನಾನ್ಯಾಕೆ ಬರೆಯಬೇಕು ನನಗೇನಾದರೂ ನೆನಪಿರುವುದು ನಿಜವಾ?

ಆದರೆ ಅವತ್ತು ನಡೆದದ್ದನ್ನು, ನನ್ನ ಅನಿಸಿಕೆಗಳನ್ನು ಬರೆಯಲೇಬೇಕು ಅಂದುಕೊಂಡಿದ್ದೆನಲ್ಲಾ.. ಈಗ ಯಾಕೋ ಬರೆದೂ ಏನುಪಯೋಗ ಅನ್ನಿಸುತ್ತಿದೆ. ಸುಮ್ಮನೆ ಶ್ರಮ. ಅಗಸ್ತ್ಯನ ಕಾಲೇಜು ಬ್ಯಾಗಿನಿಂದ ಕಳ್ಳಿಯ ಥರ ಪೆನ್ನು ಪುಸ್ತಕ ಕದ್ದಿಟ್ಟುಕೊಳ್ಳುವ ಅವಶ್ಯಕತೆ ಏನಿತ್ತು? ಆತ್ರೇಯನಿಗೆ ಹೇಳಿದ್ದರೆ ಏನೂ ಕೇಳದೆ ಅವನೇ ’ಅಮ್ಮಾ ನೀನು ಹೇಳ್ತಾ ಹೋಗು ನಾನು ಟೈಪ್ ಮಾಡ್ತಿನಿ’ ಅನ್ನುತ್ತಿದ್ದ. ಇಲ್ಲ ಪುಸ್ತಕದಲ್ಲಿ ನಾನೇ ಬರೀತಿನಿ ಅಂತ ಹಟ ಮಾಡಿದ್ದರೂ ಚಂದದ ಪುಸ್ತಕ ಪೆನ್ನು ತಂದುಕೊಡುತ್ತಿದ್ದ. ಆದರೆ ಯಾವಾಗಲಾದರೂ ಏನು ಬರ್ದಿದಿಯ ತೋರ್ಸು ಅಂತ ಕೇಳಿಯೋ ಅಥವ ಅವನ್ಯಾವಾಗಲಾದರೂ ಬಂದು, ನಾನು ಬರೆದಿದ್ದೆಲ್ಲವನ್ನೂ ಓದಿ..... ಅವನಿಂದ ಮುಚ್ಚಿಡುವಂಥದ್ದೇನು ಬರೆಯುತ್ತಿಲ್ಲ. ಅವನಿಂದ ಏನೂ ಮುಚ್ಚಿಡಬೇಕಿಲ್ಲ,

ಹನ್ನೆರೆಡು ವರ್ಷದ ಆತ್ರೇಯನಿಗೆ ನಾನು ಅವನ ಅಪ್ಪ ಜಗಳವಾಡುತ್ತಿದ್ದುದು, ಅದರ ಕಾರಣ ಎಲ್ಲಾ ಗೊತ್ತಾಗುತ್ತಿತ್ತು. ಅವನಿಗೆ ಎಲ್ಲಾ ಗೊತ್ತಾಗುತ್ತಿದೆ ಅನ್ನುವುದು ನನಗೂ ತಿಳಿದಿತ್ತು. ಆದರೆ ಏನೂ ಮಾಡಲಾಗದೆ ನಿಸ್ಸಹಾಯಕಳಾಗಿದ್ದೆ. ಅವನಿಗೆ ಎಲ್ಲಾ ತಿಳಿದಿದ್ದರೂ ನಾನು ಬರೆದಿದ್ದನ್ನು ಯಾಕೋ ಸಧ್ಯಕ್ಕೆ ಯಾರೂ ಓದೋದು ಬೇಡಾ ಅನ್ನಿಸುತ್ತಿದೆ. ನನಗೆ ಸಾಕು ಅನ್ನಿಸುವಷ್ಟು ಬರೆದಮೇಲೆ.. ಯಾವುದೋ ಒಂದು ಮಾಲಿನಲ್ಲೋ, ಸಿನಿಮಾ ಥಿಯೇಟರಿನಲ್ಲೋ, ಪಾರ್ಕಿನ ಬೆಂಚಿನಮೇಲೋ ಇಟ್ಟು ಬರಬೇಕು. ಅಲ್ಲಿ ಇನ್ಯಾವುದೋ ಓದುಗನಿಗೆ ಸಿಗಬೇಕು. ಅನಾಮಧೇಯಳಾಗಿ ಬರೆಯಬೇಕು. ಹೆಸರಿನ, ಕಾವ್ಯನಾಮದ, ಇನ್ಯಾವುದೋ ವ್ಯಕ್ತಿತ್ವದ, ಹಂಗಿಲ್ಲದೆ.

ಓದುಗ, ನಿನಗೆ ಇಷ್ಟವಾಗುತ್ತೋ ಇಲ್ಲವೋ ಅಂತ ಯೋಚಿಸದೆಯೂ ಬರೆಯಬೇಕು. ನೀನು ಕಾಫಿ ಕುಡಿಯಲು ಕಾಫಿ ಅಂಗಡಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ, ಇಡೀ ಅಂಗಡಿ ಖಾಲಿಯಾಗಿತ್ತು. ನೀನು ಬಂದು ಕೂತ ಚೇರಿನ ಪಕ್ಕದ, ಅಗಲದ, ಕಲ್ಲಿನ ಬಣ್ಣದ ಇನ್ನೊಂದು ಖುರ್ಚಿಯ ಮೇಲಿದ್ದ ಪುಸ್ತಕವನ್ನು ಸುಮ್ಮನೆ ಕುತೂಹಲದಿಂದ ಎತ್ತಿಕೊಂಡು ಓದಲು ಶುರುಮಾಡಿದ್ದೀಯ ಅಂತ ಕಲ್ಪಿಸಿಕೊಂಡು ನಾನು ಹೇಳಬೇಕಾದ್ದನ್ನ ಬರೆಯುತ್ತಾ ಹೋಗುತ್ತಿದ್ದೇನೆ. ಬರೆದದ್ದನ್ನು ಯಾರೂ ಓದೋಲ್ಲ ಅಂತ ಅನ್ನಿಸಲು ಶುರುವಾದರೆ ಬರೆಯಲು ಆಸಕ್ತಿಯೇ ಇರುವುದಿಲ್ಲ. ಇನ್ಯಾರೋ ಓದುತ್ತಾರೆ ಎಂದು ಗೊತ್ತಾದ ತಕ್ಷಣ ನಮ್ಮ ಸುಪ್ತ ಮನಸ್ಸು ನಮ್ಮನ್ನ ಒಳ್ಳೆಯವರನ್ನಾಗಿ ಬಿಂಬಿಸುತ್ತಾ ಹೋಗುತ್ತೆ, ನಮ್ಮ ತಪ್ಪುಗಳನ್ನು ನಮ್ಮ ಕೆಟ್ಟ ಗುಣಗಳನ್ನು ಹೇಳಿಕೊಂಡರೂ ಅದರಲ್ಲಿ ಸಹಾನುಭೂತಿಯ ಅಪೇಕ್ಷೆ ಇರುತ್ತದೇ ವಿನಹ ಮತ್ತೇನು ಅಲ್ಲ. ಅದಕ್ಕೇ ನಾನ್ಯಾವತ್ತೂ ಡೈರಿಯನ್ನೇ ಬರೆಯಲಿಲ್ಲ ಘಟನೆಗಳನ್ನು ಎಷ್ಟೇ ನಿಷ್ಟೆಯಿಂದ ಬರೀ ಸತ್ಯವನ್ನೇ ಬರೆಯುತ್ತೇನೆ ಅಂತ ಬರೆಯಲು ಕೂತರೂ ಪುಸ್ತಕದಲ್ಲಿ ಚಿತ್ರಿತವಾಗುವ ನಮ್ಮನ್ನು, ವಾಸ್ತವಕ್ಕಿಂತಾ ಒಳ್ಳೆಯವರನ್ನಾಗಿ ಮಾಡಿಕೊಳ್ಳುತ್ತಾ ಹೋಗುತ್ತೇವೆ, ನಮಗೇ ನಾವು ಮೋಸ ಮಾಡಿಕೊಳ್ಳುವ ಹಲವು ಬಗೆಗಳಲ್ಲಿ ಡೈರಿ ಬರೆಯುವುದೂ ಒಂದು. ನನ್ನ ಪ್ರಕಾರ ಮನಸ್ಸಿಗೆ ಗೊತ್ತಿರುವ ಚರಮ ಸತ್ಯವನ್ನ ಬರೆದಾಗಲೀ ಹೇಳಿಯಾಗಲೀ ಖಾಲಿಮಾಡಿಕೊಳ್ಳಲು ಸಾಧ್ಯವಿಲ್ಲ. ಮನಸ್ಸಿಗೆ ಮಾತ್ರ ನಮ್ಮತನ ಗೊತ್ತಿರುತ್ತೆ. ಅದು ಇನ್ಯಾವ ರೀತಿಯಲ್ಲೂ ಪ್ರಕಟಗೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ಮುಗಿಯದ ಚರ್ಚೆಗಳು. ಹೋಗಲಿ, ಕಾಫಿ ಕುಡಿಯುತ್ತಾ ಆರಾಮಾಗಿ ಓದು, ಸಕ್ಕರೆ ಜಾಸ್ತಿ ಹಾಕಿಕೊಂಡು ಕುಡಿಯುತ್ತಿಲ್ಲ ತಾನೆ? ಸಕ್ಕರೆ ಕಾಫಿಯ ರುಚಿಯನ್ನು ಕೆಡಿಸಿಬಿಡುತ್ತೆ. ನಿನ್ನ ಗೆಳೆಯನೋ ಗೆಳತಿಯೋ ಬಂದರೆ ಮುಚ್ಚಿಟ್ಟುಬಿಡು. ನಿನಗೊಬ್ಬನಿಗೇ ಕಥೆ ಹೇಳುವುದು ನಾನು.

ಆವತ್ತಿನ ದಿನದ ಬಗ್ಗೆ ಹೇಳಬೇಕು. ಅದರೆ ನನಗೆ ತುಂಬಾ ಮರೆವು ನಾನು ಹೇಳಿದ್ದನ್ನೆಲ್ಲಾ ನಿಜ ಅಂತ ನಂಬಬೇಡ, ಆದರೆ ನನಗೆ ಸುಳ್ಳು ಹೇಳಿ ದೊಡ್ಡವಳಾಗುವ ಯಾವ ಅವಶ್ಯಕತೆಯೂ ಇಲ್ಲ ಅನ್ನುವುದೂ ನೆನಪಿರಲಿ. ಅಜ್ಜಿಗೆ ಅಲ್‌ಜೈಮರ್ ಶುರುವಾಗಿರಬಹುದಾ ಅಂತ ಮೊಮ್ಮಗ ಅವರಮ್ಮನ ಹತ್ತಿರ ಹೇಳುತ್ತಿದ್ದ. ಇರಬಹುದು. ಆದರೆ ಇಷ್ಟು ಓದಿದಮೇಲೆ ಸುಳ್ಳು ಹೇಳುತ್ತೀನೋ, ನಿಜ ಹೇಳುತ್ತೀನೋ, ಕಲ್ಪಿಸಿಕೊಂಡು ಹೇಳುತ್ತೀನೋ, ಏನೇ ಆದರೂ ಇನ್ನು ಮುಂದೆಯೂ ಓದಿಯೇ ಓದುತ್ತಿಯ ಅನ್ನೋ ನಂಬಿಕೆ ಇದೆ.

ಅಂದು ನಡೆದದ್ದನ್ನ ಹೇಳುತ್ತೇನೆ. ನನಗೆ ಹೆಚ್ಚು ಕಮ್ಮಿ ಮೂವತ್ತೇಳು ವರ್ಷ. ಸುಮ್ಮನೆ ತೋಟದ ಮನೆಯ ಹೊರಗೆ ಜೋಕಾಲಿ ಮೇಲೆ ಕೂತು ಕವಿತೆಯೊಂದನ್ನ ತಿದ್ದುತ್ತಾ ಕೂತಿದ್ದೆ. ಅಷ್ಟೊತ್ತಿಗೆ ನನ್ನ ಏಳು ಕವನ ಸಂಕಲನಗಳು ಪ್ರಕಟವಾಗಿ(ಒಂಬತ್ತಿರಬಹುದು. ಎಷ್ಟಾದರೆ ಏನು?) ಎರಡಕ್ಕೆ ಎಂಥದೋ ಪ್ರಶಸ್ತಿ ಬಂದಿತ್ತು. ಅವನು ಭಾನುವಾರದ ಎಂದಿನ ಅಭ್ಯಾಸದಂತೆ ನಿಧಾನಕ್ಕೆ ಎದ್ದು ಬಂದ, ಅವನ ತುಟಿಗಳು ಯಾವಾಗಲೂ ಒದ್ದೆಯಾಗಿರುತ್ತದಲ್ಲಾ ಎನ್ನುವ ಗೊತ್ತಿರುವ ಸಂಗತಿಯನ್ನೇ ಮತ್ತೆ ಪ್ರೀತಿಯಿಂದ ನೋಡಿದೆ. ಮತ್ತೆ ಏನೋ ಬರೀತಿದಿಯಾ ಅನ್ಸುತ್ತೆ ಅನ್ನುತ್ತಾ ಪಕ್ಕದಲ್ಲಿ ಕೂತು ಜೋಕಾಲಿ ಜೀಕಿದ. ಅವನು ಪಕ್ಕದಲ್ಲಿ ಕೂತರೂ ಮನಸ್ಸು ಅವನ ತುಟಿಯನ್ನೇ ನೋಡುತ್ತಿತ್ತು.

ಅಷ್ಟು ಇಷ್ಟವಾಗುವ ಅವನು ಒಮ್ಮೊಮ್ಮೆ ಇದ್ದಕ್ಕಿದ್ದಂತೆ ತಕ್ಷಣಕ್ಕೆ ಬದಲಾಗಿದ್ದಾನೆ, ಇವನು ನನ್ನವನಲ್ಲವೇ ಅಲ್ಲ ಇನ್ಯಾರೋ ಅನ್ನಿಸುತ್ತಿತ್ತು. ಆಕ್ಷಣಕ್ಕೆ ಈ ಅಪರಿಚಿತನ ಜೊತೆ ಏನು ಮಾಡುತ್ತಿದ್ದೇನೆ ಎಂದು ಥಟ್ಟನೆ ಪ್ರಶ್ನೆ ಮೂಡಿ, ನಿಧಾನಕ್ಕೆ ನನ್ನ ಸುತ್ತಮುತ್ತಲಿನ ಪರಿಸರ, ತೆಂಗಿನ ಮರಗಳು, ಮನೆಯ ಹಿಂದಿನ ಮೀನಿನ ಕೊಳ, ಒಂಟಿ ಹುಳಿಮಾವಿನ ಮರ, ಹಸುಗಳು ನೀರು ಕುಡಿಯುವ ಟ್ಯಾಂಕು, ಕೊಬ್ಬರಿ ಒಣಗಿಸಿದ್ದ ಅಟ್ಟ, ದೂರದ ಗದ್ದೆಗಳು, ಅಲ್ಲಿನ ಟ್ರಾಕ್ಟರಿನ ಸದ್ದು ಎಲ್ಲವೂ ನಿಧಾನಕ್ಕೆ ಕರಗುತ್ತಿದೆ ಅನ್ನಿಸಿ ನಾನೊಬ್ಬಳೇ ಅನ್ನಿಸಿಬಿಡುತ್ತಿತ್ತು. ಅವನು ಮಾತಾಡುತ್ತಿರುವುದೆಲ್ಲಾ ನಿಜ ಎಲ್ಲರೂ ಸತ್ಯವಂತರು ಅಂತ ತಿಳಿದಿದ್ದರೂ ತಣ್ಣನೆಯ ಸುಳ್ಳಿನ ಕುಳಿರ್ಗಾಳಿ ನನ್ನ ತಾಕಿ ಚಕಿತಗೊಳಿಸುತ್ತಿತ್ತು.

ಹೀಗೆ ಒಬ್ಬಂಟಿ ಅನ್ನಿಸಿ ಚಕಿತಗೊಂಡು ಕೂತಾಗಲೆಲ್ಲಾ ಅವನೊಡನೆ ಮಾತು ಶುರು ಮಾಡುವುದು ಕಷ್ಟವಾಗುತ್ತಿತ್ತು. ಅವನೂ ಕೂಡಾ ಏನೂ ಸಂಭಂಧವೇ ಇಲ್ಲದಂತೆ ಕಾರ್ ಸ್ಟಾರ್ಟ್ ಮಾಡಿ ತೋಟದ ಮಧ್ಯೆ ಹೋಗಿಬಿಡುತ್ತಿದ್ದ. ಆದರೆ ಅಂದು ಅವನು ಮಾತಾಡುವವನಂತೆ ಪಕ್ಕ ಬಂದು ಕೂತ ಬಲ ಭುಜದಮೇಲೆ ಹಿತವಾಗಿ ಒರಗಿಕೊಂಡ ಮಾತಾಡದಿದ್ದರೂ ಆ ಉಸಿರಾಟದ ಏರಿಳಿತ ಅವನನ್ನು ಪರಿಚಿತನನ್ನಾಗಿಸುತ್ತಿತ್ತು. ಎಲ್ಲವೂ ನಿಧಾನಕ್ಕೆ ಗೋಚರಿಸತೊಡಗಿತ್ತು ಕಣ್ಮುಚ್ಚಿ ಅವನ ಸ್ಪರ್ಶಕ್ಕೆ ಕಾದು ಕೂತೆ. ಆದರೆ ಅವನು ಹಾಗೆ ಅಂದಿದ್ದಾದರೂ ಏತಕ್ಕೆ. ನಿನ್ನ ಕವಿತೆಗಳಲ್ಲಿ ನನ್ನ ಬಗ್ಗೆ ಬರಿಯಬೇಡ ಅಂದನಲ್ಲ ಹಾಗಂದರೆ ಅದರ ಅರ್ಥವಾದರೂ ಏನು? ನಿನ್ನ ಬಗ್ಗೆ ಬೇಕಾದರೆ ಬರೆದುಕೋ ಅಂದನಲ್ಲಾ,

ಇಷ್ಟು ವರ್ಷಗಳಲ್ಲಿ ನನ್ನನ್ನು ಅವನು ತನ್ನ ನೆರಳಾಗಿಸಿಕೊಂಡಿದ್ದಾನೆ ಅನ್ನುವುದೂ ಅವನಿಗೆ ತಿಳಿದಿಲ್ಲವೇ? ಪ್ರೀತಿ ಕಾಯ್ದುಕೊಳ್ಳೋದಕ್ಕೆ, ಅವನ ಜೊತೆ ಸಂಭ್ರಮದಿಂದ ಬದುಕುವುದಕ್ಕೆ, ಖುಷಿ ಹಂಚಿಕೊಳ್ಳುವುದಕ್ಕೆ, ದುಖಃದಲ್ಲಿ ಜೊತೆಯಾಗಿರುವುದಕ್ಕೆ, ನಾನು ನನ್ನನ್ನೇ ಇಷ್ಟಿಷ್ಟೇ ಇಷ್ಟಿಷ್ಟೇ ಕಳೆದುಕೊಳ್ಳುತ್ತಾ, ನಿಧಾನವಾಗಿ ಅವನಾಗಿದ್ದು, ನನ್ನ ಇಷ್ಟ ಆಸಕ್ತಿಗಳೆಲ್ಲಾ ಕಳೆದು ಕಲಸಿಹೋಗಿ, ನನ್ನ ಈಗಿನ ಆಸಕ್ತಿಗಳು ನನ್ನವೋ ಅವನವೋ ಎಂದು ತಿಳಿಯದಷ್ಟು ಒಂದಾಗಿರುವುದು, ಮೊದಲು ತುಂಬಾ ಗಮನವಿಟ್ಟು ಅವನಿಗೆ ಬೇಜಾರಾಗದಂತೆ ನಡೆದುಕೊಳ್ಳುತ್ತಿದ್ದುದು ಈಗ ಹಾಗಿರುವುದೇ ನನ್ನ ರೀತಿಯಾಗಿರುವುದು ಇವೆಲ್ಲವೂ ಅವನಿಗೆ ಗೊತ್ತೇ ಇಲ್ಲವೇ? ನನ್ನ ಬಗ್ಗೆ ಬರೆದರೂ ಅವನನ್ನು ನನ್ನಿಂದ ಹೊರಗಿಡುವುದು ಹೇಗೆ?

ಮನೆಯ ಮುಂದಿನ ಮಲ್ಲಿಗೆ ಬಳ್ಳಿಯ ಬಗ್ಗೆ ಬರೆದರೆ, ಆ ಹೂವು ಅವನಿಗಿಷ್ಟ ಅದಕ್ಕೆ ಅದು ಅಲ್ಲಿದೆ ಅನ್ನೋದನ್ನ ಮರೆತು ಬರೆಯಲು ಹೇಗೆ ಸಾಧ್ಯ? ಈಗ ನನಗೆ ಸೇವಂತಿಗೆಗಿಂತ ಮಲ್ಲಿಗೆಯೇ ಇಷ್ಟವಾಗಲು ಅವನು ಕಾರಣ ತಾನೆ?

* * *

ನೆನ್ನೆ ನಾನು ಬರೆಯಲು ಕೂತಾಗ ಏನು ಹೇಳುತ್ತಿದ್ದೆ ಅನ್ನೋದು ಮರೆತು ಹೋಗಿದೆ. ಈಗ ಮತ್ತೆ ಓದಿಕೊಂಡರೆ ಎಡವಟ್ಟಾಗಿ ಏನೇನೋ ಬರೆದಿದ್ದೀನಲ್ಲಾ ಹರಿದುಹಾಕೋಣ ಅನ್ನಿಸಿತು. ಆದರೂ ಇರಲಿ. ಅನಾಮಧೇಯ ಲೇಖಕಿ ಏನು ಬರೆದರೂ ಒಂದಕ್ಕೊಂದು ಸಂಭಂಧವಿಲ್ಲದಿದ್ದರೂ ನೀನು ಅಜ್ನಾತ ಓದುಗ ಬೇಕಾದರೆ ಓದುತ್ತೀಯ ಇಲ್ಲವಾದರೆ ಅಲ್ಲೇ ಪುಸ್ತಕಬಿಟ್ಟು ಹೋಗುತ್ತೀಯ. ಅದಕ್ಕೇ ಹರಿದು ಹಾಕದೆ ಬರೆಯುತ್ತಾ ಹೋಗುತ್ತೇನೆ.

ಇವತ್ತು ಮಧ್ಯಾಹ್ನ ನಾನು ನಿದ್ದೆಯಲ್ಲಿದ್ದಾಗ ಪೇಪರಿನವರು ಯಾರೋ ಸಂದರ್ಶನ ಮಾಡಲು ಬಂದಿದ್ದರಂತೆ. ಮೊಮ್ಮಗ ಬುದ್ದಿವಂತ. ಪ್ರಶ್ನೆಗಳನ್ನ ಬಿಟ್ಟು ಹೋಗಿ ಎದ್ದಮೇಲೆ ತ್ರಾಣವಿದ್ದರೆ ಉತ್ತರ ಬರೆದುಕೊಡುತ್ತಾರೆ ನಾನೇ ಟೈಪ್ ಮಾಡಿ ಮೈಲ್ ಮಾಡುತ್ತೇನೆ ಅಂದಿದ್ದಾನೆ. ಈ ಪತ್ರಕರ್ತರು ಎಷ್ಟೋ ವರ್ಷಗಳಿಂದ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಾರೆ. ದಡ್ಡರಲ್ಲ ಅವರು ಅದೇ ಪ್ರಶ್ನೆಗಳಿಗೆ ಬೇರೆ ಬೇರೆ ಉತ್ತರ ಬೇಕು ಅವರಿಗೆ. ಐದು ವರ್ಷ ಹಿಂದೆ ಹೇಳಿದ ಉತ್ತರಕ್ಕೂ ಈಗಿನ ಉತ್ತರಕ್ಕೂ ಸಾಮ್ಯತೆ ಇಲ್ಲದಿದ್ದರೆ ಅವರಿಗೆ ಖುಷಿ. ಲೇಖಕಿಯ ಅಭಿಪ್ರಾಯದಲ್ಲೇ ಭೇದ ಇದೆ ಎಂದು ಸುದ್ದಿಮಾಡಬಹುದಲ್ಲಾ. ’ಅವರಿಗೆ ಹುಶಾರಿಲ್ಲ ಮುಂದೆ ಯಾವತ್ತಾದರೂ ಉತ್ತರಿಸಬಹುದು’ ಅಂತ ಮೈಲ್ ಮಾಡು ಎಂದೆ. ಪ್ರಶ್ನೆಗಳು ಇಲ್ಲೇ ಇವೆ. ಬೋರು ಹೊಡೆಸಿದರೂ ಓದಿಕೋ..

ಕವಯಿತ್ರಿಯಾಗಿ ನಿಮ್ಮ ಸ್ಥಾನಮಾನ ಏನು?
ಮಹಿಳಾ ಲೇಖಕರಿಗಿಂತ ಪುರುಷ ಲೇಖಕರಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಅನ್ನಿಸೋಲ್ಲವಾ?
ನಿಮ್ಮ ಗಂಡ ನಿಮಗೆ ಸಪೋರ್ಟಿವ್ ಆಗಿದ್ದರಾ? ಅವರ ಸಾವಿನ ನಂತರವೂ ಅವರ ಜೊತೆ ಬಾಳುವೆ ನಡೆಸಿದಂತೆ ಬರೆದಿರಲ್ಲಾ.. ಅವರಿಲ್ಲದ ಜೀವನ ಕಷ್ಟವಾಗಿತ್ತಾ?
ನೀವು ಬರೆದ ಕಥೆಗಳಲ್ಲೆಲ್ಲಾ ’ಆಟೋಬಯಾಗ್ರಫಿಕಲ್ ಎಲಿಮೆಂಟ್’ ಇದೆ ಎನ್ನುತ್ತಾರಲ್ಲ ನೀವೇನು ಹೇಳುತ್ತೀರಿ?
ಕಥೆ ಕವಿತೆ ಕಾದಂಬರಿ ಕಾಲಮ್ಮುಗಳನ್ನು ಬರೆದಿದ್ದೀರಿ. ಎಲ್ಲವೂ ವಿಬಿನ್ನವಾಗಿರುತ್ತೆ. ಬೇರೆ ಬೇರೆ ಸಾಹಿತ್ಯಿಕ ಪ್ರಕಾರಗಳನ್ನು ಬರೆಯುವಾಗ ಬೇರೆ ಬೇರೆ ಮನಸ್ಥಿತಿಯಲ್ಲಿರುತ್ತೀರ?
ಈಗಿನ ಕಾಲದ ಲೇಖಕಿಯರು ಬೀಡೂಬಿಡುಸಾಗಿ ತಮ್ಮ ಲೈಂಗಿಕ ಜೀವನದ ಬಗ್ಗೆ ಬರೆದುಕೊಳ್ಳುತ್ತಾರೆ ಅದರ ಬಗ್ಗೆ ಜನರು ತಕರಾರೆತ್ತುವುದಿಲ್ಲಾ, ನೀವು ಬರೆದಾಗ ಬಹಳ ವಿರೋಧವಿತ್ತಲ್ಲ ಹೇಗನ್ನಿಸುತ್ತೆ?
ನೀವು ಕನ್ನಡದವರಾಗಿ ಕನ್ನಡದಲ್ಲಿ ಏನೂ ಬರಿಯದೆ ಬರೀ ಆಂಗ್ಲ ಭಾಶೆಯಲ್ಲಿ ಬರೆಯಲು ಕಾರಣವೇನು?

* * *
ಇಲ್ಲಿರುವ ಕೆಲವು ಪ್ರಶ್ನೆಗಳಿಗಾದರೂ ನಿಜವಾದ ಉತ್ತರಗಳನ್ನು ನನಗೇನನ್ನಿಸುತ್ತೋ ಅದನ್ನೇ ಹೇಳುತ್ತಾ ಹೋಗುತ್ತೇನೆ ನಾನು. ಪೇಪರಿನವರಿಗೆ ಕೊಡುವ ಸಿದ್ಧ ಉತ್ತರಗಳಲ್ಲ. ಯಾವ ಲೇಖಕನೂ ಪೂರ್ಣ ಪ್ರಮಾಣದಲ್ಲಿ ತನಗನ್ನಿಸುವುದನ್ನ ಹಾಗೇ ನೇರವಾಗಿ ಹೇಳುವುದಿಲ್ಲ. ಹಾಗೆ ಪ್ರಕಟಗೊಳ್ಳುವುದಕ್ಕೆ ಸಾವಿರ ಅಡೆತಡೆಗಳಿರುತ್ತವೆ. ಸಮಾಜದ ಅಂಜಿಕೆ ಇರುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಲೇಖಕನ ಹತ್ತಿರದವರು ತಮಗೆ ಗೊತ್ತಿಲ್ಲದಂತೆಯೇ ಅವನ ಮೇಲೆ ಪ್ರಭಾವ ಬೀರುತ್ತಿರುತ್ತಾರೆ. ಲೇಖಕನ ನಿಜವಾದ ಬರಹ ಎಲ್ಲೋ ಆಳದಲ್ಲೇ ಉಳಿದುಕೊಂಡು, ಸೋಸಿದ ಸಮಾಜ ಸರಿ ಅನ್ನುವ, ಹಿತವೆನ್ನಿಸುವ ಬರಹಗಳು ಹೊರಗೆ ಬರುತ್ತವೆ. ಈ ಕಷ್ಟಕ್ಕೆ ಲೇಖಕಿಯರು ಸಿಲುಕುವುದು ಹೆಚ್ಚು. ಇದರಿಂದ ಹೊರಬರುವುದೋ ಒಳಗೇ ಉಳಿಯುವುದೋ ಅವರವರಿಗೇ ಬಿಟ್ಟಿರುತ್ತೆ. ನಾನು ಹೊರಬರಲು ಪ್ರಯತ್ನಿಸಿದೆ.

ಸುಮ್ಮನೆ ಬರೆಯುತ್ತಾ ಹೋಗುತ್ತಿದ್ದೆ ನಾನು. ಹಾಗೆ ಸುಮ್ಮನೆ ಬರೆಯುವ ಸ್ವಾತಂತ್ರ ಹುಡುಗಿಯರಿಗಿರುವುದಿಲ್ಲ. ಹಿಂದೆ ಇದೇ ಪ್ರಶ್ನೆಗೆ ಉತ್ತರಿಸುತ್ತಾ ಸಮಾನತೆಯ ಮಾತಾಡಿದ್ದೆ. ಮಹಿಳಾವಾದ ನಗು ತರಿಸುತ್ತಿದ್ದರೂ ಮಹಿಳಾವಾದದ ರೂವಾರಿಯಂತೆ ಆಡಿದ್ದೆ. ನಿಜಕ್ಕೂ ನನಗೆ ಮಹಿಳಾವಾದ ಅಷ್ಟೊಂದು ಪ್ರಭಾವ ಬೀರಿರಲಿಲ್ಲ. ಪ್ರೀತಿ ಕಾಳಜಿಯಿಂದ ನೋಡಿಕೊಂಡ, ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಪ್ಪನ ಜೊತೆ ಬೆಳೆದ ನನಗೆ ಯಾವ ವಾದದಲ್ಲೂ ನಂಬಿಕೆ ಇಲ್ಲ. ’ಗಂಡಸು ಹೆಂಗಸು’ ’ಬುದ್ದಿವಂತ ದಡ್ಡ’ ’ಮೇಲು ಜಾತಿ ಕೀಳು ಜಾತಿ’ ’ಪಾಶ್ಚಾತ್ಯ ಪೌರ್ವಾತ್ಯ’ ಅಂತ ವಿಂಗಡಿಸೋಕ್ಕಿಂತ ತರ್ಕದಿಂದ ಯೋಚಿಸಿ ನಡೆಯುವವ ಮತ್ತು ವಿಚಾರಹೀನ ಜನ ಅಂತ ವಿಭಜಿಸುವುದು ಒಳ್ಳೆಯದು. ಜಗತ್ತಿನಲ್ಲಿ ಎರಡೇ ರೀತಿಯ ಜನರಿರುತ್ತಾರೆ ಸ್ಥಿತಿಗತಿಗಳನ್ನ ಅರ್ಥ ಮಾಡಿಕೊಂಡು ವ್ಯವಹರಿಸುವ ಜನ ಒಂದು ರೀತಿಯವರಾದರೆ ಇದಕ್ಕೆ ವಿರುದ್ಧವಾದವರು ಇನ್ನೊಂದು ರೀತಿ. ಆದರೆ ಒಂದು ವಿಚಿತ್ರ ಗಮನಿಸಿದ್ದೀಯ ಎಲ್ಲರೂ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೆಲ್ಲರನ್ನ ಸಮಾನವಾಗಿಸುವ ಗುಣ ಏನು ಗೊತ್ತಾ ನಮ್ಮ ನಮ್ಮ ವೈರುಧ್ಯಗಳು. ಪ್ರತಿಯೊಬ್ಬರೂ ಇನ್ನೊಬ್ಬರಿಗಿಂತ ಬೇರೆಯಾಗಿರುತ್ತೇವಲ್ಲ ಅದೇ ನಮ್ಮ ಎಲ್ಲರಲ್ಲಿರುವ ಸಮಾನ ಅಂಶ.


ಆವತ್ತು ಜೋಕಾಲಿಯಲ್ಲಿ ಪಕ್ಕದಲ್ಲಿ ಕೂತು ನನ್ನ ಬಗ್ಗೆ ಬರಿಯಬೇಡ ಅಂದಿದ್ದನಲ್ಲ, ನಾನದನ್ನು ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ. ನನ್ನ ಬರಹಗಳಲ್ಲಿ, ಸಂದರ್ಶನಗಳಲ್ಲಿ, ಸಹಲೇಖಕರೊಡನೆ ಆಡುವ ಮಾತುಗಳಲ್ಲಿ ನಾನು ಯಾವ ಮುಚ್ಚು ಮರೆ ಇಲ್ಲದೆ, ನನ್ನ ಸ್ನೇಹಿತರ ಬಗ್ಗೆ ಅವನ ಸ್ನೇಹಿತೆಯರ ಬಗ್ಗೆ ಹೇಳಿಕೊಳ್ಳುತ್ತಿದ್ದೆ. ಅವನಿಗೆ ಕಿರಿಕಿರಿಯಾಗುತ್ತಿತ್ತೇನೋ. ಬಹಳ ದಿನಗಳ ಮೇಲೆ ’ಫೋರ್‌ವರ್ಡ್’ ಎನ್ನುವ ಚಂದದ ಕವನವನ್ನ ಬರೆದಿದ್ದೆ. ಹಾಗೆ ಅಪರೂಪಕ್ಕೆ ಚಂದದ ಕವಿತೆ ಹುಟ್ಟಿದಾಗ ಮಾತ್ರ ಅವನಿಗೆ ತೋರಿಸುತ್ತಿದ್ದೆ. ನೋಡುತ್ತಿದ್ದ ಹಾಗೇ ಹರಿದು ಹಾಕಿದ. ಯಾಕೆಂದು ನನಗೆ ಅರ್ಥವೇ ಆಗಲಿಲ್ಲ. ’ನನ್ನ ಬಗ್ಗೆ ಬರೆಯಬೇಡ ಎಂದರೆ ಅರ್ಥವಾಗೋಲ್ಲವ ನಿನಗೆ?’ ಎಂದು ಕೂಗಿದ. ನಾನು ಪದ್ಯದ ಇನ್ನೊಂದು ಪ್ರತಿ ಇಟ್ಟುಕೊಂಡಿರಲಿಲ್ಲ. ಹರಿದ ಚೂರುಗಳನ್ನ ಒಟ್ಟು ಮಾಡತೊಡಗಿದೆ ಆಗಲೇ ನನಗೆ ’ಪೀಸಸ್ ಆಫ್ ಆಂಗರ್’ ಕವಿತೆಯ ಸಾಲುಗಳು ಮೂಡತೊಡಗಿದ್ದವು. ಯಾಕೋ ಈ ಎರಡು ಕವಿತೆಗಳನ್ನು ಮರೆಯಲು ಸಾಧ್ಯವೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ನನ್ನ ಕೋಣೆಯಲ್ಲಿ ಚೂರುಗಳನ್ನು ಹಿಡಿದು ಕೂತವಳಿಗೆ ನಾನು ಹಿಡಿದುಕೊಂಡು ಕೂತಿರುವುದು ಹಾಳೆಯ ಚೂರುಗಳನ್ನೋ ಅಥವಾ ದಾಂಪತ್ಯದ್ದೋ ಎಂದು ಅನುಮಾನವಾಗತೊಡಗಿತ್ತು. ಅವನು ಹೇಳಿದ ಮಾತುಗಳು ಘಣೀರನೆ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು. "ಕೆಲವು ರಹಸ್ಯಗಳು ಕೆಲವರ ಮಧ್ಯೆಯೇ ಇರಬೇಕು, ಓದುಗ ಅದನ್ನು ಚಪ್ಪರಿಸಿಕೊಂಡು ಓದುತ್ತಾನೆ. ಅದವನಿಗೆ ಮನೋರಂಜನೆ ಅಷ್ಟೇ.. ನೀನು ಒಳ್ಳೆಯ ಕವಯಿತ್ರಿ, ನಿನ್ನ ಕವಿತೆಗಳಲ್ಲಿ ಸಾಹಿತ್ಯಕ ಗುಣ ಇದೆ ಅಂತ ಜನ ನಿನ್ನ ಓದುತ್ತಿಲ್ಲ ನಿನಗೆ ಭಂಡ ಧೈರ್ಯ, ಏನೂ ಮುಚ್ಚಿಡದೆ ರಂಜಕವಾಗಿ ನಿನ್ನ ಪ್ರೇಮಪ್ರಕರಣಗಳ ಬಗ್ಗೆ ಬರೆದುಕೊಳ್ಳುತ್ತೀಯ ಅಂತ ಓದುತ್ತಾರೆ. ನಾನು ನಿನ್ನ ಪ್ರೇಮ ಪ್ರಕರಣಗಳನ್ನ ಹಾದರ ಅಂತ ಕರೆದು ನನ್ನ ಸ್ನೇಹಿತರ ಬಳಿ ಹೇಳಿದರೆ ನಾನು ಹಳೆಯ ಕಾಲದ ಗೂಸಲು, ನನಗೆ ಅಹಂಕಾರ, ಮೇಲ್ ಚಾವಿನಿಸ್ಟಿಕ್ ಪಿಗ್ ನಾನು. ಅದೇ ನೀನೇ ಬರೆದುಕೊಂಡರೆ ಅದು ಮುಕ್ತತೆ. ನಿನ್ನ ಈ ಮುಕ್ತತೆಯಿಂದ ನಮ್ಮ ಸಂಭಂದ ಎಷ್ಟು ಹಾಳಾಗುತ್ತಿದೆ ಅನ್ನೋದು ಅರ್ಥವಾಗೋಲ್ಲವ? ಮಕ್ಕಳ ಮೇಲೆ ಎಂಥ ಪರಿಣಾಮ ಬೀರುತ್ತೆ ಅನ್ನೋದನ್ನ ಯೋಚಿಸಿದ್ದೀಯ? ನೀನು ಏನಾದರೂ ಮಾಡಿಕೋ ನನ್ನ ಬಗ್ಗೆ, ನನ್ನ ಹಳೆಯ ಸ್ನೇಹಿತೆಯರ ಬಗ್ಗೆ, ನನ್ನ ನಿನ್ನ ಸಂಬಂಧದ ಬಗ್ಗೆ ಏನನ್ನೂ ಬರೆಯಬೇಡ’ ಎಂದು ಹೇಳಿ ನಡದೇ ಬಿಟ್ಟ.

ಇದೇ ಮಾತುಗಳನ್ನು ಆಡಿದ ಅಂತ ಎಣಿಸಬೇಡ. ಈ ಥರದ ಮಾತುಗಳನ್ನ ಆಡಿದ್ದ. ನನಗೆ ಆಗಿದ್ದ ನೋವನ್ನು ನೆನಸಿಕೊಂಡರೆ ಮಾತುಗಳು ಇನ್ನೂ ಕ್ರೂರವಾಗಿದ್ದುವೇನೋ. ಇದಾದ ಮೇಲೆ ನನ್ನ ಸ್ಥಿತಿ ಅಸಹನೀಯವಾಗತೊಡಗಿತ್ತು. ನನ್ನ ಕವಿತೆಗಳಲ್ಲಿ ಸಾಹಿತ್ಯಕ ಗುಣ ಇಲ್ಲವೇ ಎಂದು ಪ್ರಶ್ನಿಸಿಕೊಂಡು ಎಲ್ಲಾ ಕವಿತೆಗಳನ್ನು ಓದತೊಡಗಿದೆ. ಅವನು ಹೇಳಿದಂತೆ ನನ್ನ ಕವಿತೆ ಬೋಲ್ಡ್ ಆಗಿದ್ದರೂ ಅದರಲ್ಲಿ ಪ್ರೀತಿಯ ಹಂಬಲ ಇತ್ತು. ನಾನು ಪ್ರೇಮ ಪ್ರಕರಣಗಳ ಬಗ್ಗೆ ಬರೆದಿದ್ದರೂ ಕಾಮದ ಬಗ್ಗೆ, ದೇಹದ ಹಸಿವಿನ ಬಗ್ಗೆ ಬರೆಯಲಿಲ್ಲ. ಎಲ್ಲಕ್ಕಿಂತಾ ಮುಖ್ಯವಾದದ್ದು ಪ್ರೀತಿ, ಇನ್ಯಾವುದೂ ಅಲ್ಲ ಅನ್ನುವುದು ನನಗೆ ತೀರ ಚಿಕ್ಕ ವಯಸ್ಸಿಗೇ ಹೊಳೆದುಬಿಟ್ಟಿತ್ತು. ಅದೇ ನನ್ನ ಪ್ರತಿಯೊಂದು ಕವಿತೆಯಲ್ಲೂ ಢಾಳಾಗಿ ಕಾಣಿಸುತ್ತಿತ್ತು. ಆದರೂ ಓದುಗರು ನನ್ನ ಪುಸ್ತಕಗಳನ್ನು ಕೊಳ್ಳುವುದು ಮನೋರಂಜನೆಗಾಗಿ, ಚಪ್ಪರಿಸಿಕೊಂಡು ಓದುವುದಕ್ಕೆ ಎನ್ನುವ ಮಾತುಗಳೂ ಸತ್ಯ ಎನ್ನಿಸತೊಡಗಿತು. ಅವನನ್ನು ಒಳಗೊಳ್ಳದೆ, ನನ್ನನ್ನೂ ಬರಹದಲ್ಲಿ ಒಡಮೂಡಿಸದೆ ಬರೆಯಲು ನಿರ್ಧರಿಸಿದೆ.

ಆಶ್ಚರ್ಯ ಏನು ಗೊತ್ತಾ ಓದುಗ? ನಾನು ಬರೆದದ್ದೆಲ್ಲಾ ಸುಳ್ಳು ಅನ್ನಿಸುತ್ತಿತ್ತು. ಏನು ಬರೆದರೂ ಅದರಲ್ಲಿ ಸತ್ವವಿಲ್ಲ ಅನ್ನಿಸುತ್ತಿತ್ತು. ನಾನು ಪ್ರಕಟಗೊಳ್ಳದೇ ಹೋಗುವ ಕ್ಷಣ ನನ್ನದಲ್ಲ, ನನ್ನ ಬರಹಗಳಲ್ಲಿ ನನ್ನ ಅಂತಃಸತ್ವ ಮೂಡದಿದ್ದರೆ ಅದು ನನ್ನ ಬರಹವಾಗಲು ಹೇಗೆ ಸಾಧ್ಯ? ನನ್ನ ಕಥೆ ಅವನ ಕಥೆ ಬೇರೆಯಾಗಬೇಕು ಅಂದ ಅವನು. ಅವನಿಲ್ಲದ ನನಗೆ ನನ್ನ ಪೂರ್ಣ ಅಸ್ತಿತ್ವವೇ ಇರಲಿಲ್ಲ. ನಾನಿಲ್ಲದ ಅವನು ಅವನೊಳಗಿದ್ದ. ಅವನಿಲ್ಲದ ನಾನು ನನ್ನಲ್ಲಿರಲೇ ಇಲ್ಲ. ಇದನ್ನೇ ಅವನಿಗೆ ಹೇಳಲು ಪ್ರಯತ್ನಿಸಿದೆ. ಎರಡರಲ್ಲಿ ಒಂದನ್ನು ಆರಿಸಿಕೋ ಎಂದ. ಉಸಿರು ಬೇಕೋ ರಕ್ತ ಬೇಕೋ ಎಂದು ಕೇಳಿದ ಹಾಗಾಯಿತು. ಎರಡೂ ಬೇಕಿತ್ತು ನನಗೆ, ನಾನು ಜೀವಂತವಾಗಿರಲು. ಆದರೆ ಉಸಿರು ನನ್ನಿಂದ ಬಿಡುಗಡೆ ಪಡೆದುಕೊಂಡು ನನ್ನ ಜೀವಚ್ಚವವನ್ನಾಗಿ ಮಾಡಿತು. ಅವನು ಬೇರೆ ಹೋದ. ಡಿವೋರ್ಸಿಗೆ ಅಪ್ಲೈ ಮಾಡುತ್ತೇನೆ ಅಂದಿದ್ದ. ನನ್ನಲ್ಲಿನ ರಕ್ತ ಇಂಗಿ ಹೋಗಿತ್ತು. ಇನ್ಯಾರ್ಯಾರೋ ಉಸಿರ ಕೊಡಲು ಬಂದರು. ನನ್ನ ನೆನಪುಗಳಿಗೆ ಬೆಂಕಿ ಹಚ್ಚಲು ಯಾರಿಗೂ ಬಿಡಲಿಲ್ಲ. ಅವಡುಗಚ್ಚಿ, ಉಸಿರು ಬಿಗಿಹಿಡಿದು, ದೃಷ್ಟಿ ಕದಲಿಸದೆ ಬದುಕತೊಡಗಿದೆ. ದಿನೇದಿನೇ ಅವನು ನನ್ನಿಂದ ದೂರವಾಗುತ್ತಿರುವುದು ಅರಿವಾಗುತ್ತಿತ್ತು. ಹೆಚ್ಚು ಮಾತುಕತೆಯಿಲ್ಲದೆ ದಿನಗಳು ಸಾಗತೊಡಗಿದ್ದವು, ಹೀಗೆ ನನ್ನಿಂದ ದೂರವಾಗಲು ಹವಣಿಸುತ್ತಿದ್ದವನು ಇದ್ದಕ್ಕಿದ್ದಂತೆ ಅದ್ಯಾಕೋ ಎಲ್ಲರಿಂದಲೂ ದೂರವಾಗಿಬಿಟ್ಟ.

ನನ್ನ ಮುಂದಿನ ಬರಹಗಳಲ್ಲಿ ನನ್ನನ್ನೇ ನಾನು ಹುಡುಕತೊಡಗಿದ್ದೆ. ನನ್ನ ಹುಡುಕಾಟಗಳಲ್ಲೆಲ್ಲಾ ಅವನೇ. ನಾನು ಎಲ್ಲದರಿಂದ ಬಿಡುಗಡೆ ಪಡೆಯಲು ಹೊರಟಂತೆ ಬರೆದೆ. ಬದುಕಲಾರದೆ ಬರೆದೆ. ಅವನಿಗೆ ನಾನು ಋಣ ತೀರಿಸುವವಳಂತೆ, ಇನ್ಯಾವ ಸಂಭಂಧಕ್ಕೂ ಓಗೊಡದೆ ಅವನೊಂದಿಗೆ ಬದುಕುತ್ತಿರುವಂತೆ ಬರೆದೆ. ಇದನ್ನೂ ಕೂಡಾ ನೀನು ನಂಬಬೇಕಿಲ್ಲ ನಾನು ಹೀಗೆ ಬದುಕಿದ್ದಿರಬಹುದು ಅಥವಾ ನಾನು ಕೈಚಾಚಿದ ನನಗೆ ಅದಾಗೇ ದಕ್ಕಿದ ಸಂಭಂದಗಳಲ್ಲಿ ತೀವ್ರವಾಗಿ ಗುಟುಕು ಗುಟುಕಿಗೂ ಅದೇ ಕೊನೆ ಗುಟುಕುವಂತೆ ಬದುಕಿದೆ, ಪ್ರತಿಯೊಬರಲ್ಲೂ ಅವನನ್ನೇ ಹುಡುಕಿರಬಹುದು. ನನಗೆ ನೆನಪಿಲ್ಲ. ಈಗ ಹಿಂತಿರುಗಿ ನೋಡಿದರೆ ಇದೆರೆಡರಲ್ಲಿ ಯಾವುದು ಘಟಿಸಿದ್ದರೂ ಈಗಿನ ನನ್ನ ಬದುಕಿಗೆ ಹೆಚ್ಚಿನ ವೆತ್ಯಾಸವನ್ನೇನೂ ಸೃಷ್ಟಿಸಿಲ್ಲ ಅನ್ನಿಸಿ ಆಶ್ಚರ್ಯವಾಗುತ್ತಿದೆ. ಈ ಇಳೀ ವಯಸ್ಸಿನಲ್ಲಿ ಭುಧ್ಧನ ತತ್ವಗಳು ನನ್ನ ಆಕರ್ಶಿಸುತ್ತಿವೆ. ನನ್ನ ರಾಮನಿಗೆ ಬುದ್ಧನೆಂದು ನಾಮಕರಣ ಮಾಡಿದ್ದೇನೆ. ಮತಾಂತರವಾಗುತ್ತೀಯ ಎಂದು ನಗುತ್ತಾ ಕೇಳಿದ ಆತ್ರೇಯ. ನನ್ನ ಮತಾಂತರವಾಗಿ ಹೋಗಿದೆ ನಿನಗೆ ತಿಳಿದಿಲ್ಲ ಅಷ್ಟೇ ಎಂದು ಹೇಳಿದೆ.

ನಾನು ಇಷ್ಟೆಲ್ಲಾ ನನ್ನ ಬಗ್ಗೆ ಬರೆದುಕೊಂಡ ಮೇಲೆ ನಾನು ಯಾರು ಅಂತ ಸುಲಭವಾಗಿ ಗುರುತಿಸಿರುತ್ತೀಯ ನೀನು. ಇವತ್ತಿಗೂ ನನಗೆ ನಾನು ಅಜ್ನಾತವಾಗಿರುವಂತೆ ಬರೆಯಲು ಸಾಧ್ಯವೇ ಇಲ್ಲ ನೋಡು. ಅದಕ್ಕೇ ನೀನು ಇದನ್ನ ಓದಬಾರದು. ಬರೆಯುತ್ತಾ ಹೋದರೆ ನನಗೇ ಇನ್ನೂ ಬರೆಯುವ ಆಸೆ ಹೆಚ್ಚಾಗಬಹುದು. ಅಂತೆಯೇ ಕಲ್ಲು ಬೆಂಚಿನ ಮೇಲೆ ಪುಸ್ತಕವನ್ನಿಟ್ಟುಬರುವ ಆಸೆಯೂ.

* * *
ಈ ಪುಟಗಳನ್ನು ಬೆಂಕಿಗೆಸೆಯುವ ಮುಂಚೆ ಕಥೆಯೊಂದ ಹೇಳಬೇಕು. ಇದನ್ನು ಬರೆಯುವಾಗ ನನ್ನ ಅಷ್ಟು ದಿನದಿಂದ ಕಾಡುತ್ತಿದ್ದ ಅನೂಹ್ಯವಾದ ಭಯದಿಂದ ಬಿಡುಗಡೆಯಾದಂತೆ, ಕಳಚಿಕೊಂಡಂತೆ, ನೆಮ್ಮದಿಯಿಂದಿದ್ದೇನೆ. ಇಟಲಿಯ ಡ್ಯೂಕ್ ಒಬ್ಬನ ಕಥೆ ಇದು. (ಅವನದೋ ಅವನ ಹೆಂಡತಿಯದೋ?) ಅವನು ತನ್ನ ಹೆಂಡತಿಯ ಪೇಂಟಿಂಗ್ ಅನ್ನು ತೋರಿಸಿ ಅವಳ ಬಗ್ಗೆ ಹೇಳುತ್ತಾ ಹೋಗುತ್ತಾನೆ. ನಗು ಮುಖದ ವಿನಯವಂತ ಹುಡುಗಿಯವಳು, ಯಾರ ಮುಂದೆಯೂ ತನ್ನ ಹೆಚ್ಚುಗಾರಿಕೆಯನ್ನ ತೋರಿಸಿಕೊಳ್ಳದೆ ಇರುತ್ತಿದ್ದ ಆ ಹುಡುಗಿ ಕೆಲಸದವನಿಗೂ ಕೂಡಾ ಧನ್ಯವಾದ ಹೇಳುವುದನ್ನು ಮರೆಯುತ್ತಿರಲಿಲ್ಲ. ಎಲ್ಲರಿಗೂ ಅವಳ ನಗು ಮುಖದ ಪರಿಚಯವಿರುತ್ತೆ. ಡ್ಯೂಕ್‌ಗೆ ತನ್ನ ಹೆಂಡತಿ ಘನತೆಗೆ ತಕ್ಕಂತೆ ನಡೆಯುತ್ತಿಲ್ಲ ಅನ್ನಿಸುತ್ತದೆ. ಅವಳಿಗೆ ನಿನ್ನ ನಡತೆಯನ್ನು ತಿದ್ದಿಕೋ ಎಂದು ಹೇಳುವುದಕ್ಕೂ ಅವನ ಅಭಿಮಾನ ಅಡ್ಡಬರುತ್ತದೆ. ಅದಕ್ಕೆ ಅವನು ತನ್ನ ಭಟರಿಗೆ ಅಪ್ಪಣೆ ಕೊಡಿಸುತ್ತಾನೆ. ಅವಳ ನಗು ಧನ್ಯವಾದಗಳೆಲ್ಲಾ ಕೊನೆಗೊಳ್ಳುತ್ತವೆ. I gave orders and all smiles stopped ಎಂಬುದನ್ನ ಅವಳ ಕೊಲೆಯಾಯಿತು ಎಂದು ಸರಿಯಾಗಿ ಅರ್ಥಮಾಡಿಕೊಳ್ಳುವ ಜನ. I didn't like his going away from me and he died ಅಂತ ಬರೆದರೆ ಗಂಡನ ಸಾವಿನ ಬಗ್ಗೆ ದುಃಖಿಸುತ್ತಿದ್ದಾಳೆ ಎಂದು ತಪ್ಪಾಗಿ ಅರ್ಥಮಾಡಿಕೊಂಡರು. ಅಥವಾ ತಪ್ಪು ನನ್ನದೂ ಇರಬಹುದು.
- ॑ ॑-॑

Thursday, November 11, 2010

ದೂರದ ದಾರಿಯೂ ನೀವಿದ್ದರೆ ಹತ್ತಿರ..


ಅವತ್ತು, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಬರೆಯಲು ಶುರು ಮಾಡಿದಾಗ ನನಗೆ ಟೈಪ್ ಮಾಡುವುದು, ಬ್ಲಾಗು ಕಮೆಂಟುಗಳು ಇದ್ಯಾವುದರ ಗಂಧ ಗಾಳಿಯೂ ಇರಲಿಲ್ಲ. ಅಮರ ಶ್ರೀನಿಧಿ ಸೋಮು ಇವರೆಲ್ಲರೂ ಈ ಜಗತ್ತಿಗೆ ನನ್ನ ಪರಿಚಯಿಸಿದವರು, ಬ್ಲಾಗ್ ಮಾಡಿಕೊಟ್ಟು ಅದಕ್ಕೊಂದು ಚಂದದ ಹೆಸರಿಟ್ಟು ನನ್ನ ಬರಹಗಳನ್ನ ಟೈಪ್ ಮಾಡಿಕೊಟ್ಟ ಅವರೆಲ್ಲರೂ ಅಷ್ಟೊಂದು ಪ್ರೀತಿಯಿಂದ ಇಷ್ಟೆಲ್ಲಾ ಸಹಾಯ ಮಾಡಿದರು, ನೀವುಗಳು ನನ್ನ ಕಥೆಗಳನ್ನ ಓದಿ ನಾನು ತಪ್ಪು ಮಾಡಿದಾಗಲೆಲ್ಲಾ ತಿದ್ದಿ, ನಿಮಗಿಷ್ಟವಾದದ್ದನ್ನ ಹೇಳಿ ನನ್ನ ಪ್ರೋತ್ಸಾಹಿಸಿದ್ದೀರಿ. ಈ ಸಂಭ್ರಮದ ಸಮಯದಲ್ಲಿ ನಿಮ್ಮನ್ನೆಲ್ಲ ಹೇಗೆ ನೆನಪಿಸಿಕೊಳ್ಳದೆ ಇರಲಿ? ಅಂಕಿತ ಪ್ರಕಾಶನದವರು ನನ್ನ ಕಥಾ ಸಂಕಲನ ನಡೆದಷ್ಟು ದಾರಿ ದೂರ ಹೊರತರುತ್ತಿದ್ದಾರೆ. ಈ ತಿಂಗಳ ಹದಿನೇಳರಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಬಿಡುಗಡೆ. ದಯವಿಟ್ಟು ಬನ್ನಿ. ಕಾಯುತ್ತಿರುತ್ತೇನೆ. ಅಲ್ಲಿ ಸಿಗೋಣ,

Wednesday, October 13, 2010

ನಡೆದಷ್ಟೂ ದಾರಿ ದೂರ

ಭೀಮನ ಕಣ್ಣಲ್ಲಿ ಹಿಡಂಬೆ ಎಂಬ ಕಮಲಪಾಲಿಕೆ

ವನವಾಸ ಶುರುವಾಗಿ ತಿಂಗಳಾಗುತ್ತಾ ಬಂದಿತ್ತು. ಉಳಿದ ಐದು ಜನರೂ ಕಾಡಿನ ಜೀವನಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದರೂ ಭೀಮನಿಗೆ ಸರಿಹೋಗುತ್ತಲೇ ಇರಲಿಲ್ಲ. ಅದರಲ್ಲೂ ಕೃಷ್ಣೆ ಸಾಮಾನ್ಯ ಹೆಂಗಸರಂತೆ ಕಷ್ಟಪಡುವುದನ್ನು ನೋಡಿದಾಗಲೆಲ್ಲ ರೋಷ ಉಕ್ಕುತ್ತಿತ್ತು. ಕಷ್ಟ ಪಡದೆ ವಿಧಿಯೇ ಇಲ್ಲ ಅಂತಾದರೆ ಒಂದು ಥರ ಆದರೆ ಕಣ್ಮುಂದೆಯೇ ಇದೆಯಲ್ಲಾ ಪರಿಹಾರ.
ಆ ಯೋಚನೆಯನ್ನು ಮನಸ್ಸಿಗೆ ಪೂರ್ತಿಯಾಗಿ ತಂದುಕೊಳ್ಳಲೂ ಕಸಿವಿಸಿ. ಏನೋ ಒಂಥರಾ ಮುಜುಗರ ಇಕ್ಕಟ್ಟಿಗೆ ಸಿಲುಕಿದ ಹಾಗೆ. ಹಾಗೇನು ಮುಜುಗರ ಪಟ್ಟುಕೋಬೇಕಿಲ್ಲ, ಹೀಗಾಗಿದೆ ಅಂತ ತಿಳಿಸಿದರೆ ಸಾಕು. ಅಷ್ಟಕ್ಕೂ ಏನಾಗಿದೆ ಅಂತ ತಿಳಿಸಲೂ ಬೇಕಿಲ್ಲ. ಹಾಗೇ ಸ್ವಲ್ಪ ದಿನ ಹೋಗಿದ್ದು ಬಂದು ಬಿಡಬಹುದು. ಆದರೆ ಧರ್ಮ ಒಪ್ಪಬೇಕಲ್ಲ. ಕಾರಣ ಹೇಳಿಯೇ ಹೇಳುತ್ತಾನೆ. ಅವಳಾದರೂ ಸುಮ್ಮನಿದ್ದಾಳ? ಯಾರೂ ಇರಲಿಲ್ಲ ಅಂತ ನನ್ನ ಬಳಿ ಬಂದಿರಿ. ರಾಜ್ಯ ಹೋಗಿಲ್ಲದಿದ್ದರೆ ನನ್ನ ನೆನಪೂ ಆಗುತ್ತಿರುತ್ತಿರಲಿಲ್ಲ ಅಲ್ಲವೇ ಅನ್ನುತ್ತಾಳೆ. ಉಸಿರುಕಟ್ಟಿಸುತ್ತಾಳೆ. ನೀನು ಹೇಳ್ತಿರೋದೆ ಸರಿ, ಹೀಗಾಗಿ ಹೋಯ್ತು. ನೀನೇ ದಿಕ್ಕು ಅಂತ ನೇರವಾಗೇ ಹೇಳಿದ್ರೆ? ಹೌದು, ಆಗ ನೆನಪಿಸಿಕೊಳ್ಳಲಿಲ್ಲ ನಂದು ತಪ್ಪು. ಅದನ್ನ ಒಂದು ಸತಿ ಒಪ್ಪಿಕೊಂಡ್ರೆ ಆಯ್ತಲ್ಲ? ಖಂಡಿತ ಚನ್ನಾಗೇ ನೋಡ್ಕೊತಾಳೆ. ಇಂದ್ರಪ್ರಸ್ಥದ ಜೀವನ ಅಲ್ದೇ ಹೋಗಬಹುದು ಆದ್ರೆ ಹಿಂಗೆ ನಿರ್ಗತಿಕರ ಥರ ಅಂತೂ ಇರ್ಬೇಕಿಲ್ಲ. ಸರಿ ಅಣ್ಣನಿಗೆ ಹೋಗಿ ಹೇಳೋದೇ ಅಂತ ನಿಶ್ಚಯಿಸಿ ಎದ್ದು ನಿಂತ ಭೀಮ.
ಆದರೆ ಎದ್ದು ನಿಂತವನು ಹೆಜ್ಜೆ ಇಡುವ ಮೊದಲೇ ಕೃಷ್ಣೆಯ ನೆನಪಾಯಿತು. ಬೇಜಾರು ಮಾಡ್ಕೊತಾಳೆ. ಅವಳು ಇವಳನ್ನ ಹೇಗೆ ಕಾಣ್ತಾಳೋ? ಮತ್ತೆ ಕೂತುಕೊಂಡ. ತಲೆ ಧಿಮಿ ಧಿಮಿ ಅನ್ನುತ್ತಿತ್ತು. ಬೇಜಾರು ಯಾಕ್ ಮಾಡ್ಕೊಬೇಕು. ಅವ್ಳಿಗೇ ಹೇಳ್ತಿನಿ. ಅರ್ಥ ಮಾಡ್ಕೊತಾಳೆ ಅನ್ನೋ ನಿಶ್ಚಯವು ಮೂಡೋ ಮೊದಲೇ ಕರಗಿ ಹೋಯಿತು. ಕೃಷ್ಣೆ ಬೇಜಾರಾದ್ರೂ ಅಂದು ತೋರ್ಸಲ್ಲ. ಯಾವತ್ತೂ ಅಂದು ತೋರ್ಸಿಲ್ಲ. ಏನೆ ಆರ್ದ್ರೂ ನಿಂಗೇ ಅರ್ಥವಾಗಬೇಕು ಅದಾಗೇ ಅರ್ಥ ಆಗ್ದಿದ್ರೆ, ಅರ್ಥ ಮಾಡ್ಸಿಯೂ ಪ್ರಯೋಜನ ಇಲ್ಲ ಅನ್ನೋದು ಯಾವತ್ತಿನ ಮತು ಅವಳದು. ಭೀಮ ಮತ್ತೆ ನಿಧಾನವಾಗಿ ಯೋಚಿಸಿದ. ಹೆಂಗಿದ್ರು ಕಮಲಪಾಲಿಕೆಯನ್ನು ಬಿಟ್ಟು ಬಂದು ವರ್ಷಗಳೇ ಕಳೆದಿದೆ. ಬಿಟ್ಟು ಬರೋವಾಗ್ಲೇ ಬೇಜಾರು ಮಾಡಿಯಾಗಿದೆ, ವಾಪಸ್ಸು ಬರ್ತಿನಿ ಅಂತ ಮಾತೇನೂ ಕೊಟ್ಟಿಲ್ಲ. ಕರೆದಾಗ ಬರಬೇಕು ಅಂತ ಹೇಳಿದ್ದೀನಿ, ಕರೆಯುವ ಅವಕಾಶ ಬಂದಿಲ್ಲ ಅಷ್ಟೆ. ಈಗ ಹೋದ್ರೆ ಇವಳಿಗೂ ಬೇಜಾರು. ಮಾತಾಡದೆ ಏನನ್ನೂ ಹೇಳದೆ ಮೌನವಾಗಿ ಕೊಲ್ಲುತ್ತಾಳೆ. ಮೊದಲೇ ದ್ಯೂತ ಸಭೇಲಿ ಸಾಕಷ್ಟು ಬೇಜಾರು ಮಾಡಿದ್ದಾಗಿದೆ ಅಂತೆಲ್ಲಾ ಯೋಚಿಸಿ ಸರಿ ಅವಳಲ್ಲಿಗೆ ಹೋಗೋದು ಬೇಡ ಅಂತ ನಿರ್ಧರಿಸಿದ.



ಶ್ರೀಧರನ ನೆನಪಿನಲ್ಲಿ ಇಳಾ ಎಂಬ ಹಿಡಂಬೆ

ಇನ್ನು ಮುಂದೆ ಓದೋಕ್ಕೆ ಸಾಧ್ಯವೇ ಇಲ್ಲ ಅನ್ನಿಸಿ ಬುಕ್ ಮಾರ್ಕನ್ನು ಇಟ್ಟು ಕಣ್ಣು ಮುಚ್ಚಿದ ಶ್ರಿಧರ. ಹೀಗೆ ನೆನಪುಗಳು ತೊಳಸಿಕೊಂಡು ತೊಳಸಿಕೊಂಡು ಬರುವಾಗ ಓದಲಾದರೂ ಹೇಗೆ ಸಾಧ್ಯ? ಭೀಮನನ್ನು ಬೈದರೆ ನನಗ್ಯಾಕೆ ಸಿಟ್ಟು ಬರಬೇಕು, ಲಂಕೇಷರನ್ನು ಓದೋವಾಗಲೂ ಹಿಂಗೇ ಆಗುತ್ತಿತ್ತು. ಅವರ ಕಥೆಗಳನ್ನು ಕಂಡರೆ ದ್ವೇಶ ಹುಟ್ಟಬೇಕು, ಅಷ್ಟು ಹಿಂಸೆ. ಯಾವ ಕಾರಣಕ್ಕೂ ಓದಬಾರದು ಅಂದುಕೊಂಡು ಮುಚ್ಚಿಡುತ್ತಿರಲಿಲ್ಲವ? ಸಾಯಲಿ ಎಸೆದು ಬಿಡೋಣ ಅನ್ನೋಷ್ಟು ಸಿಟ್ಟು ಬಂದರೂ. ಅಲ್ಲಾ ಸುಮ್ಮಸುಮ್ಮನೆ ತಲೆನೋವು ಬರಿಸಿಕೊಳ್ಳಲು ಹುಚ್ಚಾ? ಓದುತ್ತಾ ಹೋದಹಾಗೆಲ್ಲಾ ತಲೆಯೊಳಗೆ ಒಂಥರಾ ಯಾವುದೋ ಯೋಚನೆ. ನಿದ್ದೆ ಬಾರದೆ ಮಾರನೆ ದಿನವೆಲ್ಲಾ ತಲೆ ಧಿಂ ಅನ್ನುತ್ತಿರುತ್ತಲ್ಲ ಹಾಗೇ.. ಹಾಗೇನು, ಅದೇ ಆಗೋದು. ಎಲ್ಲಾ ಕಂಗೆಡಿಸೋ ಕಥೆಗಳು. ನನ್ನ ತಪ್ಪು, ಸ್ವಾರ್ಥ, ಅಹಂಕಾರ ಇನ್ನೂ ನನ್ನೊಳಗಿನ ಬೇಡದ್ದ ಭಾವನೆಗಳನ್ನೆಲ್ಲಾ ಹೊಡದೆಬ್ಬಿಸುವಂಥಾ ಕಥೆಗಳು. ನೂರಾರು ಪುಟಗಳ ಕಾದಂಬರಿಗಳನ್ನ ಸರಾಗವಾಗಿ ಕೆಲವೇ ಗಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಲಂಕೇಶರ ಒಂದು ಕಥೆ ಓಂದೇ ಏಟಿಗೆ ಓದಿ ಮುಗಿಸಲು ಕಷ್ಟ. ಸ್ವಲ್ಪ ಓದುತ್ತಾಲೇ ಇನ್ನೇನೋ ನೆನಪಾಗಿ, ಸಣ್ಣತನಗಳು ಹೊರಬಂದ ಘಟನೆಗಳು, ಮರತೇ ಬಿಟ್ಟಿದ್ದ ಮಾತುಗಳು ಎಲ್ಲಾ ಸುಪ್ತ ಮನಸ್ಸಿನಿಂದ ಹೊರಬಂದು ಕಿರಿಕಿರಿ ಮಾಡಿ, ಕಾಡಿ, ಹಿಂಸೆ ಮಾಡಿ ಅಯ್ಯೋ ದಮ್ಮಯ್ಯಾ..
ಲಂಕೆಷ್ ಆದರೆ ಒಂದು ರೀತಿಗೆ ಸಮ. ವೈಯಕ್ತಿವಾಗಿ ಗೊತ್ತಿಲ್ಲದವರು, ಅವರು ಬರೆದಿದ್ದನ್ನು ಒಳಮನಸ್ಸು ತನ್ನ ಜೀವನದ ಯಾವುದಕ್ಕೋ ತಳುಕಿ ಹಾಕುವಾಗಲೂ ಒಂಥರಾ ಆಚೆ ಉಳಿದ ಭಾವ ಇರುತ್ತಿತ್ತು. ಆದರೆ ಇವಳು? ಇವಳು ಬರೆದಿರೋದನ್ನ ಇನ್ಯಾರದೋ ಜೀವನಕ್ಕೆ ಸಮೀಕರಿಸಲು ಹೇಗೆ ಸಾಧ್ಯ?

ನಾವಾಡಿಕೊಳ್ಳುತ್ತಿದ್ದ ಮಾತುಗಳೇ. ಭೈರಪ್ಪನವರ ಪರ್ವ ಓದೋಕ್ಕೆ ಮೊದಲೂ ಅವಳಿಗೆ ಭೀಮನೆಂದರೆ ಇಷ್ಟ. ಅದು ಓದಿದಮೇಲಂತೂ ಇನ್ನೂ. ಮಸಾಲೆ ತಿಂದು ಬರೋಣ ಅಂತ ಕ್ಯಾಂಟೀನಿಗೆ ಎಳೆದುಕೊಂಡು ಹೋದರೆ ಇವಳದು ಮತ್ತೆ ಭೀಮ ಹಿಡಂಬಿಯ ಮಾತು. ಮಹಾಭಾರತದ ಕಥೆ ಏನಾದರಾಗಲಿ. ಹಿಡಂಬಿಗೆ ತುಂಬ ಮೋಸವಾಯಿತು. ಮತ್ತೆ ವಾದ ತೆಗೆಯುವಳು. ಅಲ್ಲಾ, ನೀನೇ ಹೇಳು. ಅಷ್ಟು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ ಹಿಡಂಬಿ ಇದ್ದೂ ವನವಾಸದ ಕಾಲದಲ್ಲಿ ಅವಳಲ್ಲಿಗೆ ಹೋಗುವ ಯೋಚನೆ ಒಬ್ಬ ಪಾಂಡುಪುತ್ರನಿಗೂ ಹೊಳೆಯಲಿಲ್ಲವೆಂದರೆ ಆಶ್ಚರ್ಯ. ಹೋಗ್ಲಿ, ಭೀಮಾನಾದ್ರು ಈ ಬಗ್ಗೆ ಯೋಚನೆ ಮಾಡಬಹುದಿತ್ತಲ್ಲ? ಯಕೆ ಹೋಗ್ಲಿಲ್ಲ ಅವ್ಳ್ ಹತ್ರ? ನೆನಪಾಗಲಿಲ್ಲ ಅಂದ್ರೆ ನಂಬಕ್ಕಾಗಲ್ಲ. ಅರವತ್ತು ವರ್ಷದ ನನ್ನ ಚಿಕ್ಕ್ ತಾತ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಜೊತೆಗೋದುತ್ತಿದ್ದ ಹುಡುಗಿಯ ಬಗ್ಗೆ ನೆನಪಿಸಿಕೊಂಡು ಹೇಳುವಾಗ, ಒಂದು ವರ್ಷ ಸಂಸಾರ ಮಾಡಿ ಜೊತೆಗಿದ್ದ ಹೆಂಡತಿಯ ನೆನಪು ಬರಲಿಲ್ಲ ಅಂದರೆ ವಿಚಿತ್ರ. ಆದರೆ ಸರಿಯಾಗಿ ಯುದ್ಧದ ಹೊತ್ತಿಗೆ ಸಹಾಯ ಮಾಡಲು ಅವಳ ಮಗ ಅವಳ ಜನ ಬೇಕು. ಯೋಚನೆ ಮಾಡು, ಭೈರಪ್ಪನವರು ಬರೆದಿರೋದು ಸರಿ. ಎಲ್ಲಾ ಕುಂತಿಯಿಂದಲೇ ಆದದ್ದು. ಅಲ್ಲ ನಿಜಕ್ಕೂ ಭೀಮನ ತಪ್ಪೇ ಅಲ್ಲ, ಭೀಮ ಅಂತವನಲ್ಲ. ವ್ಯಾಸರೇ ಸರಿ ಇಲ್ಲ, ಬರೀ ಘಟನೆಗಳನ್ನ ಹೇಳಿಬಿಟ್ಟರೆ ಆಯಿತಾ ಸೂಕ್ಷ್ಮಗಳು ಬೇಡ? ವ್ಯಾಸರನ್ನು ಬೈದದ್ದಾಯಿತು, ಹಂಗಂತ ಇಳಾ ಆಗ ವ್ಯಾಸರ ಭಾರತವನ್ನ ಓದಿಕೊಂಡಿದ್ದಳು ಅಂತಲ್ಲ, ವ್ಯಾಸರನ್ನು ಬಯ್ಯುವಾಗ ಅವನನ್ನು ಓದಿಕೊಂಡಿದ್ದೀವಾ ಇಲ್ಲವಾ ಅನ್ನೋದೆಲ್ಲಾ ನೆನಪಿಗೆ ಬರೋಲ್ಲ. ನೆನಪಿಗೆ ಬಂದರೂ ಓದದಿದ್ದರೇನಂತೆ ವ್ಯಾಸರು ಖಂಡಿತ ಹಿಡಂಬಿಯನ್ನ ಕದೆಗಣಿಸಿದ್ದಾರೆ. ಅದಕ್ಕೇ ನೋಡು ಪರ್ವ ಇಷ್ಟ ಆಗೋದು. ಮತ್ತೆ ಪರ್ವಕ್ಕೆ ತಂದು ನಿಲ್ಲಿಸಿದ್ದಳು. ಇಷ್ಟೊತ್ತೂ ಸುಮ್ಮನೆ ಕೂತಿದ್ದ ಅನಂತಮೂರ್ತಿಗಳ ಪ್ರಕಾಂಡ ಶಿಷ್ಯ ಶಿವಪ್ರಸಾದ ಭೈರಪ್ಪನವರನ್ನು ಟೀಕಿಸತೊಡಗಿದ. ಮಾತಿಗೆ ಮಾತು ಬೆಳೆದು ನೀ ವಾದ ಮಾಡ್ಬೇಕು ಅಂತ ಮಾಡ್ತಿಯ, ಸುಮ್ಮನೆ ಬಯ್ಯೋದಂದ್ರೆ ನಿಂಗ್ ಖುಷಿ ನಾನು ಮೂರ್ತಿಗಳನ್ನೇನಾದ್ರೂ ಅಂದ್ನ? ನಂಗೆ ಇಬ್ಬರೂ ಲೇಖಕರೂ ಇಷ್ಟ. ಒಂದು ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳೋಕ್ಕೆ ಬರೋವರ್ಗೂ ಉದ್ಧಾರ ಆಗೋಲ್ಲ. ಮಸಾಲ ದೋಸೆ ಹೆಂಗಿದೆ? ಎಷ್ಟು ಹೈಜೀನಿಕ್ ಆಗಿ ಮಾಡಿದಾನೆ? ಅನ್ನೋದು ಮುಖ್ಯ ಯಾರು ಮಾಡಿದ್ದು ಅನ್ನೋದಲ್ಲ ಅಂತೆಲ್ಲಾ ಯಾವುದ್ಯಾವುದಕ್ಕೋ ಹೋಲಿಸಿ ಮಾತು ಮುಗಿಸಿದ್ದಳು. ಶಿವಪ್ರಸಾದ್ ಅನಂತಮೂರ್ತಿ ಭೈರಪ್ಪನವರ ವಿಷಯ ಮಧ್ಯೆ ತಂದಿದ್ದು ಇಷ್ಟವಾಗದಿದ್ದರೂ, ನನಗ್ಯಾಕೋ ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳಬೇಕು ಅನ್ನೋದನ್ನ ಒಪ್ಪಿಕೊಳ್ಳೋಕ್ಕೆ ಆಗಿರಲಿಲ್ಲ.

ಇಳಾಳಿಗೆ ತನ್ನ ಬಗ್ಗೆ ಏನನ್ನಿಸುತ್ತಿತ್ತು ಅಂತ ಶ್ರೀಧರ ಯೋಚಿಸಲು ಶುರು ಮಡಿದ. ನೀನು ನನ್ನ ಭೀಮ ಅನ್ನುತ್ತಿದ್ದಳು. ಆದರೆ, ಹಿಡಂಬಿಯ ಹಾಗೆ ಅವಳಾಗೇ ನನ್ನ ಬಳಿ ಬಂದಿರಲಿಲ್ಲ, ಛೇ ನಮ್ಮಗಳನ್ನ ನಾವು ಪುರಾಣದ ಪಾತ್ರಗಳಿಗೇಕೆ ಹೋಲಿಸಿಕೊಳ್ಳಬೇಕು? ನಾವು ಯಾರು ಅಂತ ಕಂಡುಕೊಳ್ಳೋಕ್ಕೆ ಅವಕಾಶವೇ ಕೊಡದಂತೆ ಚಿಕ್ಕಂದಿನಿಂದ ನೀನು ನಿನ್ನ ತಾತನ ಹಾಗೆ, ಬ್ರಂಹಾಂಡ ಸಿಟ್ಟು. ಆದ್ರೆ ನನ್ನ ಥರ ಮೃದು ಮನಸ್ಸು ಅನ್ನುತ್ತಿದ್ದ ಅಮ್ಮನಿಮ್ದ ಹಿಡಿದು, ನೀನು ಅವನ ಹಾಗೆ ಮಾತು ಕಮ್ಮಿ ಇನ್ಯಾರದೋ ರೀತಿ ನಿನ್ನ ಧ್ವನಿ ಇನ್ನು ಏನೇನೋ.. ಎಲ್ಲರೂ ಹೋಲಿಸುವವರೇ. ನಾನ್ಯರು ಅಂತ ಇವತ್ತಿಗೂ ನನಗೇ ಗೊತ್ತಾಗದ ಹಾಗೆ. ನನ್ನ ಭೀಮನಿಗೆ ಹೋಲಿಸುತ್ತಿದ್ದ, ಭೀಮನನ್ನು ಅಷ್ಟು ಇಷ್ಟ ಪಡುತ್ತಿದ್ದ ಇವಳು ಈಗ ಭೀಮನನ್ನ ಬೇರೆ ರೀತಿಯಲ್ಲಿ ಚಿತ್ರಿಸಿದ್ದಾಳೆ. ಪುರಾಣದ ಪಾತ್ರಗಳ ಸ್ವಭಾವ ಮನುಷ್ಯರ ಈಗಿನ ನಡವಳಿಕೆಗಳ ಆಧಾರದ ಮೇಲೆ ಚಿತ್ರಣಗೊಳ್ಳುತ್ತೆ. ಯೋಚನೆಯೇ ಮಾಡದ, ನೇರಾ ನೇರ ಮನಸ್ಸಿನ, ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದ ಮಗುವಿನ ಹೃದಯದ ಭೀಮ, ಯೋಚನೆ ಮಾಡುವ, ಯಾರ್ಯಾರಿಗೆ ಏನೇನನಿಸುತ್ತೆ? ಅಂತ ಲೆಕ್ಕ ಹಾಕುವ ಭೀಮನಾಗಿ ಹೋಗುತ್ತಾನೆ. ಅವಳಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಕೊಳಕು ಪದಗಳಲ್ಲಿ ಬೈಯ್ಯಬೇಕು ಅನ್ನಿಸಿತು. ಹೀಗೆ ಪುರಾಣವನ್ನ ಮನಸ್ಸಿಗೆ ಬಂದಂತೆ ಚಿತ್ರಿಸಲು ಅವಳಿಗೆ ಹಕ್ಕನ್ನು ಕೊಟ್ಟೋರು ಯಾರು? ಫೋನ್ ಮಾಡಿದರೂ ಬಯ್ಯಲಂತೂ ಆಗೋದಿಲ್ಲ ಅನ್ನೋದೂ ಹೊಳೀತು. ಬಯ್ಯೋದು ಹೋಗ್ಲಿ ಮಾತಾಡಿಸೋಕ್ಕಾದರೂ ಅವಳು ಫೋನ್ ಎತ್ತಬೇಕಲ್ಲ.

ಶ್ರೀಧರ ನಿರ್ಭಾವುಕನಾಗಿ ಓದಿದ ಮತ್ತಷ್ಟು ಪುಟಗಳು

ಎಣಸಿಕೊಂಡಳು, ಇಂದಿಗೆ ಸರಿಯಾಗಿ ಎಂಟು ವರ್ಷ ನಾಲ್ಕು ತಿಂಗಳು, ಇವನು ಹುಟ್ಟೋದನ್ನೀ ಕಾಯುತ್ತಿದ್ದಂತೆ ಹೊರಟರಲ್ಲ ಎಲ್ಲರೂ. ನಿನ್ನ ಕರ್ತವ್ಯ ಅಷ್ಟೇ ಅಂತ ವೇದವ್ಯಾಸರು ಹೇಳಿದರು ಎನ್ನುವ ನೆಪ ಬೇರೆ. ಇವನಾದರೂ ಇರಬಹುದಿತ್ತು. ಅವರಿಗೆಲ್ಲ ಕಷ್ಟವಾಗುತ್ತಿತ್ತು. ಹೌದು, ಸುಖಭೋಗಗಳ ನಡುವೆ ಬೆಳೆದವರ ಕಷ್ಟವೇ ಇದು, ಸುಲಭವಾಗಿ ಕಾರ್ಪಣ್ಯಗಳಿಗೆ, ಬದಲಾವಣೆಗಳಿಗೆ ಹೊಂದಿಕೊಳ್ಳೋಲ್ಲ. ಆದರೂ ಅವರಿಗೆ ಹಿಂಸೆಯಾಗದಂತೆ ನಡೆದುಕೊಳ್ಳುತ್ತಿರಲಿಲ್ಲವಾ ನಾನು? ಯಾರಿಗಾದರೂ ಎದುರು ಮಾತಾಡಿದ್ದೆನಾ? ಅಣ್ಣ ಸತ್ತ ನಂತರ ಕಿರ್ಮೀರನ ಮಕ್ಕಳು ತಾವೇ ಮುಖಂಡರಾಗಬೇಕು ಅಂತ ಎಷ್ಟು ಕಷ್ಟ ಪಟ್ಟರು, ಭೀಮ ಇಲ್ಲದೇ ಹೋಗಿದ್ದರೆ ಅವರೇ ಯಾರಾದರೂ ಬಲವಂತವಾಗಿ ಮದುವೆ ಮಾಡಿಕೊಂಡು.. ಸಧ್ಯ ಹಾಗಾಗಲಿಲ್ಲ. ಸಣ್ಣಂದಿನಿಂದಲೂ ನನಗೆ, ಎಲ್ಲಾದರೂ ಹೋಗಬೇಕು, ಕಾಡುಗಳಿಂದ, ಆಕಾಷ ಕಾಣದಂತೆ ಮುಚ್ಚುವ ಮರಗಳಿಂದ ದೂರ ತುಂ ದೂರಕ್ಕೆ, ಯಾವುದಾದರೂ ಬಯಲಿನಲ್ಲಿ ಅಂಗಾತ ಮಲಗಿಕೊಂಡು ನಕ್ಷತ್ರ ಎಣಿಸಬೇಕು, ಬೇಕಾದಾಗ ಕಾಡಿಗೆ ಹೋಗಿ ಸಾಕಷ್ಟು ಮಾಂಸ ಹಣ್ಣು ತಂದಿಟ್ಟುಕೊಂಡು ಬೇರೇನನ್ನಾದರೂ ಮಾಡಬೇಕು, ಎಲ್ಲಾ ಕಾಡು ಬಯಲು ಝರಿ ಸುತ್ತಬೇಕು, ಹುಡುಗರಂತಿರಬೇಕು ಸುಮ್ಮನೆ ಕೂರಬಾರದು.. ಕನಸುಗಳಿಗೆ ಕಟ್ಟೆಯಲ್ಲಿ?

ರಾಜಕುಮಾರನೊಬ್ಬನನ್ನು ಮದುವೆಯಾಗುತ್ತೇನೆಂದು ಕನಸೂ ಕಂಡಿರಲಿಲ್ಲ. ಮನುಷ್ಯರೆಲ್ಲಾ ದುರ್ಬಲರಾದ ಆಟಿಕೆಗಳಂತೆ ಕಾಣುತ್ತಿದ್ದರು. ಘನವಲ್ಲದ ಯಾವುದೂ ನನ್ನ ಯಾವತ್ತೂ ಆಕರ್ಷಿಸಿದ್ದಿಲ್ಲ. ಅಂಥದ್ದರಲ್ಲಿ ಮನುಷ್ಯರಲ್ಲೊಬ್ಬನಾದ ಇವನನ್ನು ನಾನು ಹಾಗೆ ಬಯಸಿ ಬಯಸಿ ಮದುವೆಯಾಗುತ್ತೇನೆಂದು ಯಾರು ಕಂಡಿದ್ದರು? ನಿಜಕ್ಕೂ ಅವನು ಮನುಷ್ಯರಂತೆಲ್ಲಿದ್ದ? ಅವನ ಅಗಲ ಬುಜ, ತೋಳುಗಳನ್ನು ನೋಡಿದವಳಿಗೆ ಅವನ ಅಪ್ಪುಗೆಯೊಳಗೆ ಪುಡಿಪುಡಿಯಾಗಬೇಕು ಅನ್ನಿಸಿತ್ತು, ನಾಭಿಯಾಳದಲ್ಲಿ ಭೋರ್ಗರೆತ. ನಾಚಿಕೆಯೇ ಇಲ್ಲದವಳಂತೆ ಹೋಗಿ ಕೇಳುವವರೆಗೂ ಅವನು ತಿರಸ್ಕರಿಸಬಹುದು ಎಂದು ಹೊಳೆದೇ ಇರಲಿಲ್ಲ, ಅವನು ತಿರಸ್ಕರಿಸುವ ಒಪ್ಪಿಕೊಳ್ಳುವ ಮೊದಲೇ ಅಣ್ಣ ಬಂದುಬಿಟ್ಟನಲ್ಲ.. ಪಾಪ ಅನ್ನಿಸುತ್ತಿದೆ.. ಭೀಮನನ್ನು ನೋಡಿಯೇ ಅರ್ಥ ಮಾಡಿಕೊಳ್ಲಬೇಕಿತ್ತು. ಅವನು ಸಾಮಾನ್ಯನಲ್ಲ ಅಂತ. ಇಲ್ಲ ಅಣ್ಣನಿಗೆ ಅಹಂಕಾರ, ಅಲ್ಲದೆ ಯಾವತ್ತೂ ಯೊಚನೆ ಮಾಡುವ ಸ್ವಭಾವವೇ ಅಲ್ಲ ಅಣ್ಣನದು, ಮನುಷ್ಯರಲ್ಲವಾ ಅನ್ನೋ ಉಡಾಫೆಯಿಂದಲೇ ಎಗರಿ ಬಿದ್ದ. ಅಣ್ಣನ ಜೊತೆ ನಿಂತು ಹೋರಾಡಿದ್ದರೆ? ಇಲ್ಲ, ಇನ್ನೂ ನಾವು ಹತ್ತು ಜನ ಇದ್ದರೂ ಭೀಮ ಭೀಮನೇ... ಜೊತೆಗೆ ಅವನೊಬ್ಬ ಎದ್ದು ನಿಂತನಲ್ಲ ಬಿಲ್ಲು ಬಾಣ ಹಿಡಿದುಕೊಂಡು, ಇದೆಲ್ಲಾ ಈಗ ಹೊಳಿಯುತ್ತೆ. ಆಗ ನಿಜಕ್ಕೂ ನನ್ನ ಆವಾಹಿಸಿಕೊಂಡಿದ್ದು ಅವರಿಬ್ಬರ ಕಾದಾಟ. ಅಣ್ಣ ಪ್ರಾಣಿಗಳ ಮೇಲೆ ಎಗರುವಂತೆ ಅವುಗಳಿಗೆ ಪೆಟ್ಟುಕೊಡುವಂತೆ ಭೀಮನ ಮೇಲೆ ಎಗರುತ್ತಿದ್ದರೆ, ಭೀಮನದು ಲೆಕ್ಕಾಚಾರದ ಹೊಡೆತ. ಹೊಡೆದಾಡುವುದನ್ನು ಹೇಳಿಕೊಡುವುದಕ್ಕೂ ಅವರಿಗೆ ಗುರುಗಳಿರುತ್ತಾರೆ ಅಂತ ಗೊತ್ತಾಗಿದ್ದು ಆಮೇಲೆ. ಇವನು ಯೋಚನೆ ಮಾಡುವ ಮೊದಲೇ ಅವರಮ್ಮನೇ, ಹೂಂ ಒಪ್ಪಿಕೋ ಭೀಮ ಅವಳನ್ನು ಮದುವೆ ಮಾಡಿಕೋ ಅಂದುಬಿಟ್ಟರಲ್ಲಾ... ಅವನಿಗೇ ಆಶ್ಚರ್ಯ ಆಗುವಂತೆ. ಅವನು ನಿರಾಕರಿಸುವ ಹೊತ್ತಿಗೆ ಆ ಗಡ್ಡದ ವ್ಯಾಸ ಎಲ್ಲಿಂದಲೋ ಹೇಳಿಮಾಡಿಸಿದಂತೆ ಬಂದನಲ್ಲ, ಅವನ ಮಾತನ್ನು ಮೀರುವ ಹಾಗೇ ಇಲ್ಲವಂತೆ. ಆ ಬಿಲ್ಲು ಬಾಣದವನ ಮುಖದಲ್ಲಿ ತೆಳ್ಳಗೆ ಕಂಡೂಕಾಣದಂತೆ ಹರಡಿದ್ದು ತಿರಸ್ಕಾರವೇ ಇರಬೇಕು. ಇಲ್ಲಿರುವವರೆಗೂ ಅವನು ನನ್ನೆಡೆಗೆ ನಮ್ಮವರೆಡೆಗೆ ಬಿಗಿಯಾಗೇ ಇದ್ದ. ಅರ್ಥವಿಲ್ಲದ ಅಹಂಕಾರ.
ಮೊದಮೊದಲು ಕಸಿವಿಸಿ ಪಟ್ಟುಕೊಳ್ಳುತ್ತಿದ್ದ ಭೀಮ ನಿಧಾನಕ್ಕೆ ನನಗೆ ಅಂಟಿಕೊಂಡುಬಿಟ್ಟಿದ್ದ. ಆದರೆ ಕೆಲವೇ ತಿಂಗಳು ಅದು. ಘಟೋದ್ಘಜ ಹೊಟ್ಟೆಯಲ್ಲಿ ಹೊರಳಲು ಶುರುಮಾಡಿದ್ದ ಅಷ್ಟೇ, ಅವರಮ್ಮ ಬಂದು ಹೆಳಿದರಲ್ಲ, ಮಗು ಹುಟ್ಟಿದಮೇಲೆ ನಾವು ಹೊರಡುತ್ತೇವೆ ಅಂತ. ಹುಚ್ಚು ಕೋಪ ಬಂದಿತ್ತು ನನಗೆ. ಅಲ್ಲೇ ಅವಳನ್ನು ಪುಡಿಪುಡಿ ಮಾಡಿಬಿಡುವಷ್ಟು. ಆದರೆ ಭೀಮನ ಅಮ್ಮ ಸುಮ್ಮನಾದೆ. ಭೀಮನಿಗೆ ಹೇಳುತ್ತೇನೆ, ಅವನು ಹೊರಡೋಕ್ಕೆ ಒಪ್ಪಬೇಕಲ್ಲ ಅಂದುಕೊಂಡು ಅವನನ್ನು ಕೇಳಿದರೆ ಅವನು ಕಣ್ಣಿಗೆ ಕಣ್ಣು ಕೊಟ್ಟು ಮಾತಾಡುತ್ತಲೇ ಇರಲಿಲ್ಲ. ಇವನಿಗೂ ಸಾಕಾಗಿ ಹೋಗಿದೆ ಅಂತ ಅಳು ಒತ್ತರಿಸಿಕೊಂಡು ಬಂದಿತ್ತು. ಈಗಲೇ ಹೊರಟು ಹೋಗಿ ಅಂದೆ. ಅವರಮ್ಮ ಮೊಮ್ಮೊಗನ ಮುಖ ನೋಡಿಯೇ ಹೋಗೋದು ಅಂತ ಹಟ ಹಿಡಿದರು. ನಿಜಕ್ಕೂ ಹೋಗಲು ಆತರವಾಗಿದ್ದು ಇವನಿಗೆ. ನಮ್ಮ ಜೊತೆ ಬರುತ್ತೀಯ ಎಂದು ಮಾತಿಗೂ ಕೇಳಲಿಲ್ಲ. ರಾಕ್ಷಸಿಯ ಜೊತೆ ಇದಾನೆ ಎಂದರೆ ಇವನ ಮಾನ ಮಕ್ಕಾಗುವುದಿಲ್ಲವ? ಅವತ್ತಿನಿಂದ ಅವನ ಜೊತೆ ಸುತ್ತಾಡುವುದನ್ನು ನಿಲ್ಲಿಸಿಬಿಟ್ಟೆ, ಮಾತೂ ಎಣಿಸಿದಹಾಗೆ, ನಾನು ನನ್ನ ಹೊಟ್ಟೆಯಲ್ಲಿದ್ದ ಕಂದ, ಅವನೂ ಒಂದೆರೆಡು ಬಾರಿ ಮಾತಾಡಲು ಪ್ರಯತ್ನಿಸಿದೆ ಎನಿಸಿಕೊಳ್ಳಲು ಸಮಾಧಾನ ಮಾಡಲು ಬಂದವನಂತೆ ಮಾಡಿ ಆಮೆಲೆ ಸುಮ್ಮನಾಗಿಬಿಟ್ಟಿದ್ದ. ಹೊರಡುವ ಮೊದಲು ಎಷ್ಟು ಕೊಸರಿಕೊಂಡರೂ ಬಿಡದೆ ಮೂಳೆಗಳು ಮುರಿಯುವಂತೆ ಅಪ್ಪಿಕೊಂಡು ಕಣ್ಣೀರು ಸುರಿಸಿದನಲ್ಲಾ? ಏನರ್ಥ ಅವನದು? ಈ ನಾಟಕಗಳಿಗೆಲ್ಲಾ ಕಲ್ಲಾಗಿ ಹೋಗಿದ್ದೆ ನಾನು. ಹ್ಮ್ ಮ್.. ನಿಟ್ಟುಸಿರೆಳೆದುಕೊಂಡಳು.
ತೆಲೆ ಎತ್ತಿದರೆ ಘತೋಧ್ಗಜ ನಿಂತಿದ್ದ ಏನೋ ಕೇಳಬೇಕೆನ್ನುವಂತೆ ಎಷ್ಟೊತ್ತಿಂದ ನಿಂತಿದ್ದನೋ ಹೇಳು ಸನ್ನೆ ಮಾಡಿದೆ.. ಅವರು ಕಾಡಲ್ಲಿ ನಮ್ಮ ಜೊತೆ ಬಂದು ಇರುತ್ತಾರ? ಬರ್ಬರೀಕ ಹೇಳುತ್ತಿದ್ದ ಅವರು ಹನ್ನೆರೆಡು ವರ್ಷ ಕಾಡಲ್ಲಿ ಇರಬೇಕು ಅಂತ ಆಗಿದೆಯಂತೆ. ಅದಕ್ಕೇ ಇಲ್ಲೇ ಬಂದು ಇರ್ತಾರೆ ನೋಡು ಬೇಕಾದ್ರೆ ಅಂತಿದಾನೆ.. ಸಂಭ್ರಮ ನಿರೀಕ್ಷೆಗಳಿಂದ ಹೇಳಿದ. ಬರ್ಬರೀಕ ಹೇಳಿದ್ದು ನಿಜವಿರಲಿ ಎಂದು ಬೇಡುವಂತೆ. ಆದರೆ ಅವನು ಬರುವುದಿಲ್ಲವೆಂದು ನನಗಿಂತಾ ಚನ್ನಾಗಿ ಯಾರಿಗೆ ಗೊತ್ತಿರಬೇಕು?

ಕಾಡುತ್ತಿರುವುದು ಅವಳಾ? ತನ್ನೊಳಗಿನ ಭಯವಾ?

ಮತ್ತೆ ಪುಸ್ತಕ ಮುಚ್ಚಿದ ಶ್ರೀಧರ. ಮತ್ತದೇ ದಿಮಿಗುಟ್ಟುವ ತಲೆ, ಸೋತ ಸೋತ ಭಾವ.. ಕೋಪವನ್ನ ಹೇಗಾದರಾದರೂ ಹರಿಬಿಡಬೇಕು... ಕಥಾರ್ಸಿಸ್. ಈ ಪುಸ್ತಕವನ್ನ ಚಾಕುವಿನಿಂದ ಚುಚ್ಚಿದರೆ ಅವಳಿಗೆ ನೋವಾಗಬಹುದಾ? ಚುಚ್ಚಿದ ತಕ್ಷಣ ರಕ್ತದಂತೆ ಪದಗಳು ಸೋರಿಹೋದರೆ.. ನಿಜಕ್ಕೂ ಚಲ್ಲಿಹೋಗಬಹುದೇನೊ ಎನ್ನುವ ಅನುಮಾನವಿರುವವನಂತೆ ಪೂರ್ತಿ ಓದಿದಮೇಲೆ ಚುಚ್ಚೋಣ ಅಂದುಕೊಂಡ. ಅವಳನ್ನು ನಾನ್ಯಾಕೆ ಬಿಟ್ಟು ಬಂದೆ ಸಾವಿರ ಸಲ ಕೇಳಿಕೊಂಡಾಗಿದೆ. ಸಾವಿರ ಸಲಕ್ಕೂ ಬೇರೆ ಬೇರೆ ಉತ್ತರಗಳು. ನಿಜವಾದ ಉತ್ತರ ಯಾವುದು? ಅವಳು ಕಂಡುಕೊಂಡ ಉತ್ತರವಂತೂ ಅಲ್ಲ.. ಅವಳು ಸಾಕಾಗಿ ಅವಳಿಂದ ದೂರ ಹೋಗಿ ಸುಖವಾಗಿರಲು.. ಅವಳ ಗಂಡುಬೀರಿತನದಿಂದ ಹೆದರಿಕೊಂಡು ಸಾಕಾಗಿ ಬಂದಿದ್ದಲ್ಲ.. ಯಾಕೋ ನನಗೆ ಯಾರ ಜೊತೆಗೂ ಇರಲು ಸಾಧ್ಯವಿಲ್ಲ ಅನ್ನಿಸುತ್ತೆ. ಪ್ರೀತಿಯಂದರೇನು ಅನ್ನುವ ಉತ್ತರ ಕಂಡುಕೊಳ್ಳಲು ಸಾಧ್ಯವಾಗದೆ ಉಳಿದು ಹೋಗಿದ್ದೇನೆ. ಇದೆಲ್ಲಾ ಅರ್ಥವಾಗುತ್ತಾ ಅವಳಿಗೆ? ಪ್ರೀತಿಸುವವರ ಜೊತೆಗಿದ್ದರೆ ಮಾತ್ರ ಪ್ರೀತಿ ಅರ್ಥ ಆಗೋದು ಅನ್ನುವಂಥ ವ್ಯರ್ಥ ಮಾತುಗಳನ್ನಾಡುತ್ತಾಳೇನೋ ಈಗಲೂ.. ಯಾಕೆ ನನಗೆ ಯಾರನ್ನಾದರೂ ಪ್ರೀತಿಸಲು ಸಾಧ್ಯವೇ ಆಗಿಲ್ಲ? ಸುಮ್ಮನೇ ಜೊತೆಗಿರುತ್ತಾ, ಒಬ್ಬರಿಗೊಬ್ಬರಿಗೆ ಸಹಾಯವಾಗುತ್ತಾ ಅವರ ಸುಖ ದುಖಗಳಲ್ಲಿ ಭಾಗಿಯಾಗುವುದನ್ನೇ ಪ್ರೀತಿ ಅನ್ನುವುದಾದರೆ, ಅಂಥದು ಯಾರ ಜೊತೆಗಾದರೂ ಆಗಬಹುದಲ್ಲಾ? ಆಗ ಅವಳಿದ್ದಳು, ಅವಳು ಅತ್ತರೆ ಪಾಪ ಅನ್ನಿಸುತ್ತಿತ್ತು. ನನಗೆ ಬೇಜಾರಾದರೆ ಅವಳು ಏನಾಯ್ತೋ ಅಂತ ಕೇಳುತ್ತಿದ್ದಳು. ಅದೇ ಅವಳ ಜಾಗದಲ್ಲಿ ಯಾರೇ ಇದ್ದರೂ ನಾನು ಹಾಗೇ ರಿಯಾಕ್ಟ್ ಮಾಡ್ತಿದ್ದೆ, ಅವಳೂ ಅಷ್ಟೇ. ಅದ್ಯಾಕೆ ಅವಳಿಗೆ ಅರ್ಥವಾಗಲಿಲ್ಲ? ಅರ್ಥವಾಗುವುದಿಲ್ಲ?

ಸಿನಿಮಾಗಳನ್ನ ನೋಡಿದರೆ ನಗು ಬರುತ್ತಿತ್ತು. ಅವನು ಪ್ರೀತಿಸಿದ ಹುಡುಗಿ, ‘ನಿ ಇಷ್ಟ ಇಲ್ಲ’ ಅಂತಲೋ, ಅಥವ ಹೇಳಲೇ ಬಾರದ ಗಹನವಾದ ವಿಷಯದಂತೆ ಸುಮ್ಮನಿದ್ದುಬಿಡುವ ಸುಂದರಿ, ಅವಳು ಸಿಗದೆ ದುಃಖಿಸುವ ಅಳುವ, ನೋವಿದ್ದರೂ ಅಥವ ನೋವಿನಲ್ಲಿ(ಅದು ನೋವಾ? ಮತ್ತೆ ಪ್ರಶ್ನೆ?) ಹಾಡುವ ಹುಡುಗ, ಅವಳನ್ನು ದಕ್ಕಿಸಿಕೊಳ್ಳುವುದಕ್ಕೆ ಅವನು ಪಡುವ ಪರಿಪಾಟಲು, ಕೊನೆಗೂ ಸಿಗುವ, ಸಿಗದೇ ಬೇರ್ಯಾರನ್ನೋ ಮದುವೆಯಾಗಿ ಹೋಗುವ, ಇಲ್ಲ ಸತ್ತೇ ಹೋಗುವ ಹುಡುಗಿ. ಎಂಥದೋ ಒಂದು. ಅಂತೂ ಸಿನೆಮಾ ಮುಗಿಯುತ್ತದೆ. ಎಲ್ಲರ ಜೀವನದಲ್ಲೂ ಅಷ್ಟೇ. ಅವನು ಅವಳು ಸಿಗುವವರೆಗೆ ಅದು ಸಿನೆಮಾ, ಆಮೇಲೆ? ಪ್ರೀತಿಯ ಮೊದಲ ಹಂತಗಳು ಮುಗಿದು ‘ನಾನು ಅವನಿಗೇ-ಅವಳು ನನ್ನವಳು’ ಅಂತ ಸ್ಥಾಪಿತವಾದಮೇಲೆ? ಪ್ರೀತಿ ಅಂದರೇನು ಅಂತ ಪ್ರಶ್ನೆ ಹುಟ್ಟುತ್ತದಲ್ಲಾ? ಎಷ್ಟು ತಡಕಾಡಿದರೂ ಉತ್ತರವೇ ಸಿಗದಂಥಾ ಪ್ರಶ್ನೆ, ಅದ್ಯಾಕೆ ಹಾಗೆ? ಒಬ್ಬರಿಗೊಬ್ಬರು ಅಭ್ಯಾಸವಾಗುತ್ತಾ ಹೋಗುತ್ತಾರೆ, ಅವನಿಗೆ ಪೆಟ್ಟಾದರೆ ಇವಳಿಗೆ ಚಿಂತೆಯಾಗುವುದಕ್ಕೆ ಶುರುವಾಗುತ್ತದೆ, ಇವಳು ಅವತ್ಯಾವತ್ತೋ ಊಟ ಮಾಡದೆ ಮಲಗಿದಳು ಅಂತ ಅವನಿಗೆ ಬೇಜಾರು. ಇಂಥದೇ ನೂರು ಥರಾವರಿ ಘಟನೆಗಳಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಕಾಳಜಿ. ಯಾರೇ ಹತ್ತಿರದವರಿಗಾದರೂ ಕಾಳಜಿ ತೋರಿಸುವುದಿಲ್ಲವಾ?? ಕಾಳಜಿಗೂ ಪ್ರೀತಿಗೂ ವೆತ್ಯಾಸ ಉಂಟಲ್ಲ? ಹೌದಾ ಇದೆಯಾ? ಅವನು ಇನ್ನೊಬ್ಬ ಹುಡುಗಿಯನ್ನು ತುಂಬ ಹೊತ್ತು ಮಾತಾಡಿಸಿದರೆ ಇವಳೊಳಗೆ ಧಗ ಧಗ. ಮುನಿಸು ಜಗಳ. ‘ನಾನವನನ್ನು ಪ್ರೀತಿಸೋದರಿಂದ ನಂಗೆ ಹೊಟ್ಟೆ ಉರಿಯುತ್ತೆ, ಪ್ರೀತಿನೇ ಇಲ್ಲಾ ಅಂದಿದ್ರೆ ಏನೂ ಅನ್ನಿಸುತ್ತಿಲಿಲ್ಲ’. ಎಲ್ಲಾ ಕಾಲದ ಪೊಸೆಸ್ಸಿವ್ ಹುಡುಗ ಹುಡುಗಿಯರ ಸ್ಟಾಂಡರ್ಡ್ ಸಮರ್ಥನೆ. ಪ್ರಕಾಶ ಒಮ್ಮೆ ಮಾತಾಡಿದ್ದು ನೆನಪಿಗೆ ಬಂತು. “ಸೈಟ್ ನಂದು. ಅವ್‌ನ್ಯಾರೋ ಬೇವರ್ಸಿ ಬಂದು ಬೇಲಿಹಾಕಿದಾನೆ. ಅವರಪ್ಪನ ಮನೆ ಗಂಟು ಅನ್ನೋ ಥರ. ಅದಕ್ಕೇ ಹೊಟ್ಟೆ ಉರಿಯತ್ತೆ ಬೇರೆಯವರಾಗಿದ್ರೆ ನಂಗೇನ್ ಅನ್‌ಸ್ತಿರ್ಲಿಲ್ಲ” ಅಂದಿದ್ದ. ಹಾಗಾದ್ರೆ ‘ಐ ಓನ್ ದಿಸ್’ ಅನ್ನೋದಕ್ಕೂ ‘ಐ ಲವ್’ ಅನ್ನೋದಕ್ಕೂ ವೆತ್ಯಾಸ ಇಲ್ವಾ? ಪ್ರೀತಿ ದೈಹಿಕ ಸ್ಥಿತಿಗತಿಗಳಿಗೆ ಸಂಭಂದಿಸಿದ್ದಾ? ಇಲ್ಲ ಮನಸ್ಸಿಂದಾ? ಕೊನೆ ಮೊದಲಿರದ ಪ್ರಶ್ನೆಗಳು.
ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಯಾರನ್ನಾದರೂ ಪ್ರೀತಿಸುತ್ತಿದ್ದೇನೆ ಅನ್ನುವ ಧೈರ್ಯವಾದರೂ ಹೇಗೆ ಬರಬೇಕು ನನಗೆ? ಪ್ರೀತಿ ಇರದೇನೇ ಅದು ಅರ್ಥವಾಗದೇನೇ ಮದುವೆಯಾಗಿ ನರಳುವುದಕ್ಕಿಂತ ಈಥರದ ಜೀವನ ವಾಸಿ ಎಂದು ಆಯ್ದುಕೊಂಡೆ. ಇವಳ್ಯಾರು ನನ್ನ ಕಾಡೋದಕ್ಕೆ?

ಹಿಡಂಬೆಯ ಸ್ವಗತದಲ್ಲಿ ಪೂರ್ವಾಪರದ ಹಳಹಳಿಕೆ

ಕಾಮಕಂಟಕೆ ಇನ್ನೂ ಮಂಕಾಗಿದ್ದಳು.. ಮಗುವೊಂದು ಇಲ್ಲದೇ ಹೋಗಿದ್ದರೆ? ನೆನೆಸಿಕೊಳ್ಳಲೂ ಭಯವಾಯಿತು ಹಿಡಂಬೆಗೆ. ತನಗಾದರೂ ಗಂಡ ಬದುಕಿದ್ದಾನೆ ಎಂಬುದು ತಿಳಿದಿತ್ತು. ನಾನು ವಂಚನೆಗೊಳಗಾದ ಭಾವನೆಯಲ್ಲಿ ನರಳುತ್ತಿದ್ದರೂ ಅವನು ಬದುಕಿದ್ದಾನೆ ಎಂದಾದರೂ ಬರಬಹುದು ಅನ್ನೋ ಸುಳ್ಳು ನಿರೀಕ್ಷೆಯಾದರೂ ಇತ್ತಲ್ಲಾ. ಇವಳಿಗೆ ಕಣ್ಣ ಮುಂದೆಯೇ ಕಾದಾಡಿ ಸತ್ತ ಗಂಡನ ನೆನಪು ಕಬಳಿಸಿ ನುಂಗುವುದಿಲ್ಲವೇ? ಅವಳು ಬದುಕಬೇಕು ತನ್ನ ಮಗುವಿಗಾದರೂ. ಅಯ್ಯೋ ಅವನಿಗೋಸ್ಕರ ಕಾದಾಡಿ ಸತ್ತೆಯಲ್ಲಾ ಮಗನ ಮೇಲೆ ಭೀಮನ ಮೇಲೆ ಅಸಾಧ್ಯ ಸಿಟ್ಟು ಬಂತು. ವಾಪಸ್ಸು ನಡೆದು ಹೋಗಿ ಅಂದು ನಡೆದ ಘಟನೆಗಳನ್ನು ಬದಲಿಸುವ ಶಕ್ತಿಯಿದ್ದಿದ್ದರೆ ಅನ್ನಿಸಿತು. ಘಟೋದ್ಗಜ ಆ ಯುದ್ಧಕ್ಕೆ ಹೋಗುವ ಮೊದಲು ಎಳೆದುಕೊಂಡು ಬರಬೇಕಿತ್ತು. ಸಹಾಯ ಮಾಡಿ ಎಂದು ಅವರ ಕಡೆಯವರು ಬಂದು ಕರೆದರಲ್ಲ. ಸ್ವತಹ ಅವನಮ್ಮ ಕುಂತಿ ಪತ್ರ ಕಳುಹಿಸಿದ್ದಳು. ನಾನು ಮಗನಿಗೆ ಹೋಗು ಅನ್ನಲಿಲ್ಲ, ಹೋಗಬೇಡ ಅನ್ನಬಹುದಿತ್ತು. ಆದರೆ ಹುಟ್ಟಿಸಿದವನಿಗೂ iಗುವಿನ ಮೇಲೆ ಅಧಿಕಾರ ಇರುತ್ತದಲ್ಲ, ಬರೀ ಹುಟ್ಟಿಸಿದ ಕಾರಣಕ್ಕಾದರೂ. ಮಗ ಹೊರಟು ನಿಂತ ಯಾವುದೋ ನಿಶ್ಚಯ ಮೂಡಿದವನಂತೆ. ಹಠ ಬಿಡದ ಎಳೆ ಪ್ರಾಯದ ಹೆಂಡತಿಯೂ ಹೊರಟು ನಿಂತಳು. ಇದೆಲ್ಲಾ ಭೀಮನಿಂದಲೇ ಆದದ್ದು ಕೊಂದುಹಾಕಬೇಕು ಅವನನ್ನು ಅನ್ನಿಸಿತು.
ಕೋಪದಿಂದ ಹೊರಟವಳು ನದಿಯ ಬಳಿ ಬಂದು ಕೂತಿದ್ದಳು. ಹುಳುಗಳು ಮೂಡಿಸುವ ಚಿಕ್ಕಚಿಕ್ಕ ಅಲೆಗಳನ್ನು ಗಮನಿಸುತ್ತಾ. ಯಾರೋ ಬರುತ್ತಿರಬೇಕು ಅನ್ನಿಸಿತು. ಬರ್ಬರೀಕ ಓಡುತ್ತಾ ಬಂದು ಏದುಸಿರಿನಲ್ಲಿ ಹೇಳಿದ ಅವರು ಬಂದು ಕಾಡಿನ ಹೊರಗೆ ಬೀಡು ಬಿಟ್ಟಿದ್ದಾರೆ ತಮ್ಮ ಅಪ್ಪಣೆಯಿದ್ದರೆ ಒಳಗೆ ಬರುತ್ತಾರಂತೆ ಭಟನೊಬ್ಬನನ್ನು ಕಳುಹಿಸಿದ್ದರು. ಯಾರ್ಯಾರಿದ್ದಾರೆ ಕೇಳಿದಳು. ಭೀಮ ಕೊನೆಗೂ ಬಂದಿದಾನೆ ಅನ್ನುವುದು ಬರ್ಬರೀಕ ಹೇಳುವ ಮೊದಲೇ ಹೊಳೆಯಿತು. ಕುಂತಿಯ ಹೆಸರು ಕೇಳಿದೊಡನೆ ಎದ್ದು ನಿಂತಳು.
ದುಖದ ಕಟ್ಟೆ ಒಡೆಯಿತು. ಕುಂತಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಹೇಳಬೇಕಾದ್ದನ್ನು ಹೇಳಿ ನ್ನಿಸೂರಾದ ಕುಂತಿಯ ನಿಟ್ಟುಸಿರಿನಿಂದ ಕಿಡಿ ತಾಕಿಸಿಕೊಂಡ ಹಿಡಂಬಿಯ ಕೋಪ ಅವಳನ್ನೇ ದಹಿಸುತ್ತಿತ್ತು. ಈ ಹೆಂಗಸು ನನ್ನ ಬಳಿ ಬರುವುದೇ ನನ್ನ ಬರಿದಾಗಿಸುವುದಕ್ಕೆ, ಉಗುಳು ನುಂಗುವುದೂ ಯಮಯಾತನೆ. ಎಲ್ಲಾ ಮೊಮ್ಮೊಕ್ಕಳೂ ಮರಿಮಕ್ಕಳೂ ಸತ್ತು ಹೋಗಿದ್ದಾರೆ. ಅದಕ್ಕೇ ಕೊನೆಗೆ ಯಾರೂ ಇಲ್ಲದಕ್ಕೆ ನನ್ನ ಮೊವ್ಮೂಗ ಬೇಕು. ರಾಕ್ಷಸ ರಕ್ತ ಈಗ ಅಸಹ್ಯವಾಗುವುದಿಲ್ಲವಾ? ತಲೆತಗ್ಗಿಸಿಕೊಂಡೇ ಕೂತಿದ್ದ ಭೀಮನನ್ನು ದುರುದುರು ನೋಡಿದಳು. ಕಾಮಕಂಟಕೆಗೆ ಭೀಮ ದೇವರು. ಇವರು ಸತ್ತಾಗ ಹೇಗೆ ದೇಹವನ್ನು ತಬ್ಬಿಕೊಂಡು ಅತ್ತರು ಗೊತ್ತಾ ಹಿಡಂಬಿ? ಕೊನೆಗೆ ದ್ರೌಪದಿ ಬಹಳ ಹೊತ್ತು ಸಮಾಧಾನ ಮಾಡಬೇಕಾಯಿತು. ಇವನೂ ತಾತನನ್ನು ತುಂಬ ಹಚ್ಚಿಕೊಂಡಿದ್ದಾನೆ. ಅವಳು ಸಾವಿರ ಸಲ ಹೇಳಿದ್ದಳು. ಅವಳಿಗೆ ಹೋಗಲು ಮನಸ್ಸಿದೆ ಖಂಡಿತ ನನ್ನ ಉತ್ತರಕ್ಕಾಗಿ ಕಾಯುತ್ತಿರುತ್ತಾಳೆ. ಇನ್ನು ಉಗುಳು ನುಂಗಲಾಗುವುದೇ ಇಲ್ಲಾ.. “ನೀನೂ ಬಂದು ಬಿಡು ಹಿಡಂಬಿ ಇಲ್ಲ್ಯಾಕೆ ಇರಬೇಕು ಕಾಡಿನಲ್ಲಿ ಕಷ್ಟಪಟ್ಟುಕೊಂಡು..” ಉಸುರಿದಳು ಕುಂತಿ. ಅಸಹ್ಯವಾಗಿ ವಾಂತಿಬರುವಂತಾಯಿತು. ತಲೆತಿರುಗಿ ಬಿದ್ದುಬಿಡುತ್ತೇನೆ ಎಂದುಕೊಂಡಳು. ಅವತ್ಯಾವತ್ತೂ ನಾನು ಒಬ್ಬಂಟಿಯಾಗುತ್ತೇನೆ ಎನ್ನೋದು ಹೊಳೆಯಲಿಲ್ಲವಾ? ನಿಧಾನವಾಗಿ ಎದ್ದು ತನ್ನ ಮರದ ಪೊಟರೆಯನ್ನು ಸೇರಿಕೊಂಡಳು. ಭೀಮ ಒಳಹೋಗಲು ನೋಡಿದ ಅದರ ಬಾಗಿಲು ಭಧ್ರವಾಗಿ ಮುಚ್ಚಿತ್ತು.

ಮುಗಿದಿದ್ದು ಕಾದಂಬರಿಯಷ್ಟೇ ನೆನಪುಗಳಿಗೆ ಕೊನೆಯಿಲ್ಲ

ಶ್ರೀಧರ ಯೋಚಿಸತೊಡಗಿದ. ಅಲ್ಲ ಕಾದಂಬರಿಯೊಂದನ್ನು ಮುಗಿಸುವ ರೀತಿಯೇ ಇದು? ಅವಳ ಮನಸ್ಸಿನಲ್ಲಿರೋದಾದರೂ ಏನು? ಏನಿದೆಲ್ಲದರ ಅರ್ಥ? ನಾನವಳನ್ನು ಎಲ್ಲರಿಂದ ದೂರವಾಗುವಂತೆ ಮಾಡಿ ಒಂಟಿ ಮಾಡಿದೆ ಎನ್ನುವುದಾ? ಕಾಲೇಜಿನ ಕೊನೆಯ ದಿನಗಳು ನೆನಪಾಗತೊಡಗಿದವು.. ಸಧ್ಯ ಕೊನೇಗೂ ಪರೀಕ್ಷೆ, ಕ್ಲಾಸು, ಅಸೈನ್ಮೆಂಟು, ಅಟೆಂಡೆನ್ಸುಗಳಿಗೆಲ್ಲಾ ವಿದಾಯ. ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ನಮ್ಮ ದುಡ್ಡು ನಾವು ದುಡಿದುಕೊಂಡು ಇರಬಹುದು, ಎಂದು ಖುಶಿಯಾಗುತ್ತಿದ್ದರೆ, ಅಯ್ಯೋ ಮುಗಿದೇ ಹೋಯಿತಲ್ಲಾ.. ಇಲ್ಲಿನ ಖುಷಿ, ಕೇರ್‌ಲೆಸ್ ಜೀವನ, ಹುಡುಗಿಯರನ್ನು ಚುಡಾಯಿಸುವುದು, ಎಲ್ಲದಕ್ಕೂ ಟಾಟಾ ಹೇಳಬೇಕು. ಇನ್ನು ಜವಾಬ್ದಾರಿಗಳು ಬೆಂಬಿಡದ ಬೇತಾಳದಂತೆ ಹೆಗಲೆರುತ್ತವೆ ಎನ್ನುವ ಚಿಂತೆ ಇನ್ನೊಂದೆಡೆ. ಅಲ್ಲದೆ ನನಗೆ ಅವಳಿಗುತ್ತರಿಸುವುದಿತ್ತು, ಮುಂದೇನು ಎನ್ನುವ ಪ್ರಶ್ನೆ ಎದುರಾದಾಗಲೆಲ್ಲಾ ನಾನು ಮೌನಿ. ನನಗೆ ಅವಳು ಹೇಳುತ್ತಿದ್ದ ಪ್ರೀತಿಯ ವ್ಯಾಖ್ಯೆ ಅರ್ಥವಾಗುತ್ತಿರಲಿಲ್ಲ. ಅವಳು ಖಂಡಿತ ಬೇಕು ಅನ್ನಿಸುತ್ತಿದ್ದಳು. ಅವಳ ಅಪ್ಪುಗೆಯ ಸುಖ, ಅವಳೊಡನೆ ಮಾತು, ಸಾಹಿತ್ಯ, ಅಪರೂಪಕ್ಕೆ ಆಡುತ್ತಿದ್ದ ಬ್ಯಾಡ್ಮಿಂಟನ್, ಬೆಳಗ್ಗಿನ ವಾಕ್‌ಗಳು, ಎಲ್ಲವೂ ಚಂದವೇ ಆದರೆ ಪ್ರೀತಿ? ನನಗೆ ಉತ್ತರಿಸಲು ತಿಳಿಯುತ್ತಿರಲಿಲ್ಲ. ಅವಳ ಕಣ್ಣುಗಳ ತುಂಬ ಪ್ರಶ್ನೆ. ಅವಳು ಬಾಯಿಬಿಟ್ಟು ಕೇಳುತ್ತಿರಲಿಲ್ಲ ಅಷ್ಟೆ. ಕೇಳುವಂಥ ಸಂದರ್ಭಕ್ಕೆ ಅವಕಾಶವೇ ಕೊಡದಂತೆ ತಪ್ಪಿಸಿಕೊಂಡು ಬಂದಿದ್ದೆ.
ಅವಳು, ಹಳೆಯ ಸ್ನೇಹಿತರು ಜೊತೆಯಲ್ಲಿಲ್ಲದೆ ಮೊದಮೊದಲು ಹಿಂಸೆಯಾಗುತ್ತಿತ್ತು. ಆಮೇಲೆ ಮತ್ತೆ ಎಲ್ಲಾ ಸರಿ ಹೋಯಿತಲ್ಲ. ಯಾರೂ ಅನಿವಾರ್ಯವಲ್ಲ ಅನ್ನುವ ಸತ್ಯವನ್ನು ಗಟ್ಟಿಮಾಡುತ್ತಾ. ಯಾವಾಗಲೂ ಒಬ್ಬರ ಬದಲಿಗೆ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ.
ಅಷ್ಟೊಂದು ನೋವು ಕೊಟ್ಟಿದ್ದೇನಾ? ನಾನೂ ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದುದಂತೂ ಹೌದು. ಆದರೆ ನಿಧಾನಕ್ಕೆ ಅಭ್ಯಾಸವಾಯಿತಲ್ಲ. ಅವಳಿಗೆ ಆಗಲಿಲ್ಲವಾ? ಇನ್ನೂ ನನ್ನ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುತ್ತಾಳೆ ಎನ್ನುವುದೂ ಖುಶಿಯನ್ನೇನು ಉಂಟುಮಾಡುತ್ತಿಲ್ಲ. ಆದರೆ ಪಾಪ ಅನ್ನಿಸುತ್ತೆ. ಹೌದೇನೆ ನಿಜವಾಗಲೂ ಇನ್ನೂ ಅಷ್ಟು ಇಷ್ಟ ಪಡ್ತಿಯ? ಅಂತ ಮುದ್ದುಗರೆಯುತ್ತಾ ಕೇಳಬೇಕು ಅನ್ನಿಸುತ್ತೆ. ಆದರೆ ಅಷ್ಟಕ್ಕೇ ಅವಳದನ್ನ ಪ್ರೀತಿ ಅಂತ ತಪ್ಪು ಅರ್ಥ ಮಾಡಿಕೊಂಡರೆ.. ಭಯವಾಯಿತು. ಇಲ್ಲ, ಅದನ್ನೆಲ್ಲಾ ಮೀರಿ ಬೆಳದಿರುತ್ತಾಳೆ. ಅವಳಿಗೆ ಉತ್ತರಗಳನ್ನು ಕೊಡಲೇ ಬೇಕು. ಪ್ರಶ್ನೆಗಳನ್ನೆತ್ತಿದ್ದಾಳೆ, ಉತ್ತರಗಳನ್ನೂ ಕೇಳಲಿ. ನೇರವಾಗಿ ಮನೆಗೇ ಹೋಗುತ್ತೇನೆ, ಹೇಗೆ ಅವಾಯ್ಡ್ ಮಾಡುತ್ತಾಳೆ ನೋಡೋಣ.
ಯೋಚಿಸುತ್ತಾ ಶ್ರೀಧರ ಕಾದಂಬರಿಯ ಕೊನೆಯ ಪುಟಗಳತ್ತ ಕಣ್ಣು ಹಾಯಿಸಿದ. ಧೀರೇಂದ್ರ ಆಚಾರ್ಯರು ಬರೆದ ಬೆನ್ನುಡಿ ಕಾಣಿಸಿತು. ಅದರ ಶೀರ್ಶಿಕೆಯೇ ಕುತೂಹಲ ಮೂಡಿಸಿತು.

ಪುರಾಣವನ್ನು ವರ್ತಮಾನಕ್ಕೆ ಒಗ್ಗಿಸುವ ವಿಫಲ ಯತ್ನ

ಇಳಾ ಅವರ ಕಾದಂಬರಿಯನ್ನು ನಾನು ಓದುವುದಕ್ಕೆ ಎತ್ತಿಕೊಂಡಾಗ ಇದ್ದ ಕುತೂಹಲ ಓದಿ ಮುಗಿಸುವ ಹೊತ್ತಿಗೆ ಇರಲಿಲ್ಲ. ಇಳಾ ಭಾಷೆ, ಯೋಚಿಸುವ ರೀತಿ, ಕಥೆ ಹೇಳುವ ಶೈಲಿ ಎಲ್ಲದರಲ್ಲೂ ನವ್ಯೋತ್ತರದ ಛಾಪಿದೆ. ಆದರೆ ನನ್ನ ತಕರಾರಿರುವುದು ಅವರ ಕಾದಂಬರಿಯ ವಸ್ತುವಿನ ಬಗ್ಗೆ. ಪುರಾಣವನ್ನು ಪುರಾಣವನ್ನಾUಯೇ ನೋಡುವ ಏಕಾಗ್ರತೆಯನ್ನು ಲೇಖಕಿ ಬೆಳಸಿಕೊಂಡಿಲ್ಲ. ಪುರಾಣದ ಕಥೆಗಳನ್ನು ತಿರುಚಬಾರದು ಅನ್ನುವುದು ನನ್ನ ವಾದವಲ್ಲ. ಆದರೆ ಒಂದು ಪಾತ್ರದ ಸಂವಿಧಾನವನ್ನು ಯೋಚನಾ ಕ್ರಮವನ್ನು ಬದಲಾಯಿಸುವುದು ಮೂಲ ಲೇಖಕನಿಗೆ ಮಾಡುವ ಅನ್ಯಾಯ. ಈ ಕಾಲಘಟ್ಟದ ಜನರ ಆಲೋಚನೆ, ತಲ್ಲಣ, ಭಗ್ನಪ್ರೇಮ, ಯಾಚನೆ, ಆಕ್ರೋಶ ಮತ್ತು ವಿರಹಗಳನ್ನು ಹಿಡಂಬಿಯ ಪಾತ್ರಕ್ಕೆ ಆರೋಪಿಸುತ್ತಾರೆ ಇಳಾ.
ವೇದವ್ಯಾಸರು ದೊಡ್ಡ ಲೇಖಕರಾಗುವುದು ಇಂಥಾ ವಿಚಾರದಲ್ಲೇ. ಅವರ ಹುಟ್ಟು ಬದುಕಿನ ಕಥೆ ಎಲ್ಲರಿಗೂ ತಿಳಿದಿರುವುದೇ. ಆದರೆ ಎಲ್ಲೂ ಅದರ ಪ್ರಭಾವ ಮಹಾಭಾರತದ ಮೇಲೆ ಆಗಿಲ್ಲ. ಅವರ ಏಕಾಂತದ ಯೋಚನೆಗಳು ನೋವುಗಳು ಕಾದಂಬರಿಯ ಪಾತ್ರಗಳನ್ನು ಪ್ರಭಾವಿಸಿಲ್ಲ. ದಾರ್ಶನಿಕನಿಗೆ ಇರಬೇಕಾದ ಗುಣ ಅದು. ಅವನು ತನ್ನನ್ನು ಹೊರಗಿಟ್ಟುಕೊಂಡು, ಕಥೆ ಕಟ್ಟುತ್ತಾ ಹೋಗುತ್ತಾನೆ. ಹಾಗಾದಾಗಲೇ ಲೇಖಕನ ಹಂಗಿಲ್ಲದೆಯೂ ಒಂದು ಕೃತಿ ನಮಗಿಷ್ಟವಾಗುತ್ತದೆ.
ಹಿಡಿಂಬೆ ರಾಕ್ಷಸ ಕುಲಕ್ಕೆ ಸೇರಿದವಳು. ಕಾಡಿನಲ್ಲಿ ವಾಸಿಸುವವರೆ ಜೀವನಕ್ರಮ ಯೋಚನೆಗಳು ಎಲ್ಲಾ ಬೇರೆ ಬೇರೆ. ಭೀಮ ಅವಳನ್ನು ಕೂಡುವ ಮೂಲಕ ಆಕೆಯನ್ನು ಪುನೀತನಾಗಿಸಿದ್ದಾನೆ. ಅವಳಿಗೊಂದು ಮಗುವನ್ನು ಕೊಟ್ಟು, ಮೊದಲೇ ಆದ ಒಪ್ಪಂದದ ಪ್ರಕಾರ ಬಿಟ್ಟು ಹೋಗಿದ್ದಾನೆ. ಅಲ್ಲದೆ ಘಟೋಧ್ಗಜ ಭೀಮ ಯುದ್ಧಕ್ಕೆ ಮೊದಲೇ ಭೇಟಿಯಾಗಿರುತ್ತಾರೆ. ಭೀಮ ಸೌಗಂಧಿಕಾ ಪುಷ್ಪವನ್ನು ತರೋಕ್ಕೆ ಹೋಗಿ ತುಂಬ ದಿನ ಬರದೇ ಇದ್ದಾಗ ಸಹಾಯ ಮಾಡೋದಕ್ಕೆ ಘಟೋದ್ಗಜನನ್ನು ಕರೆಯುತ್ತಾಳೆ ಕುಂತಿ, ರಾಜಸೂಯಯಾಗದ ಸಂಧರ್ಭದಲ್ಲಿ ಘಟೋದ್ಗಜ ಇಂದ್ರನನ್ನು ಸೋಲಿಸಿ ಕಪ್ಪವನ್ನು ತಂದಿರುತ್ತಾನೆ. ಪಾಂಡವರು ವನವಾಸ ಕಾಲದಲ್ಲಿ ಗಂಧಮಾದನ ಪರ್ವತದದಲ್ಲಿ ಸಂಚರಿಸುತ್ತಿದ್ದ ವೇಳೆ ಆಯಾಸಗೊಂಡು ದ್ರೌಪದಿ ಮೂರ್ಛಿತಳಾಗಿ ಬೀಳುತ್ತಾಳೆ. ಆಗ ಘಟೋಧ್ಗಜ ಅವಳನ್ನು ಹೆಗಲಮೇಲೆ ಕೂರಿಸಿಕೊಂಡು ಬಂದು ನಾರಾಯಣಾಶ್ರಮದಲ್ಲಿ ಬಿಡುತ್ತಾನೆ. ಅಲ್ಲದೆ ಅಭಿಮನ್ಯು ಮತ್ತು ವತ್ಸಲೆಯರ ಮದುವೆ ಮಾಡ್ಸುವಲಿಯೂ ಘಟೋಧ್ಗಜ ಮಹತ್ವದ ಪಾತ್ರ ವಹಿಸುತ್ತಾನೆ.
ಹೀಗಾಗಿ ಭೀಮನದಾಗಲಿ, ಕುಂತಿಯದಾಗಲೀ ತಪ್ಪು ಎಂದು ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿಯೇ ಹೊರತು ಆ ಪಾತ್ರದ್ದಲ್ಲ. ಆದರಿಂದ ಅದು ಆರೋಪಿತ ಚಿಂತನೆ. ಹೀಗಾಗಿ ಹಿಡಂಬೆಯ ಪಾತ್ರಕ್ಕೆ ಲೇಖಕಿ ನ್ಯಾಯ ಒದUಸಿಲ್ಲ. ಮತ್ತು ಅದಕ್ಕೆ ಪ್ರಾಪ್ತವಾಗಬೇಕಾದ ಪುರಾಣದ ಗುಣ ಪ್ರಾಪ್ತವಾಗಿಲ್ಲ.
ಇಷ್ಟಾಗಿಯೂ ಈ ಕಾದಂಬರಿಯನ್ನು ಕುತೂಹಲದಿಂದ ಓದಿಕೊಳ್ಳಬಹುದು. ಕೊಂಚ ಅಧ್ಯಯನ, ಭಾವನೆಗಳ ಮೇಲೆ ಹತೋಟಿಮತ್ತು ವರ್ತಮಾನ-ಪುರಾಣದ ನಡುವಿನ ತೆಳುಗೆರೆಯನ್ನು ಕಂಡುಕೊಳ್ಳುವ ಕಣ್ಣಿದ್ದರೆ ಇದು ಮತ್ತಷ್ಟು ಉತ್ತಮ ಕೃತಿಯಾಗುತ್ತಿತ್ತು ಎಂಬುದು ನನ್ನ ವಿನಮ್ರ ಅನಿಸಿಕೆ.

ವಿಮರ್ಶೆಯ ಹೊಸಿಲಾಚೆಗೆ ಅವಳ ನೆನಪಿನ ಘಮಲು

ಬಾಲ್ಕನಿಗೆ ಹೋಗಿ ತನ್ನ ಇಷ್ಟದ ಸಿಗರೇಟನ್ನು ಹಚ್ಚುವ ಮೊದಲೊಮ್ಮೆ ಧೀಘವಾಗಿ ಉಸಿರೆಳೆದುಕೊಂಡ. ವರ್ಜೀನಿಯಾ ಟೊಬ್ಯಾಕೋ ಘ್ಂ ಎನ್ನುತ್ತಿತ್ತು. ಜಾರಿಬೀಳದಂತೆ ನಿಧಾನವಾಗಿ ಕಟ್ಟೆಯಮೇಲೆ ಕೂತು ಸಿಗರೇಟು ಹತ್ತಿಸಿದ. ಬೆರಳತುದಿಯ ಜೀವಕೋಶವೂ ನೆಮ್ಮದಿಯಾಗಿ ಕಾಲುಚಾಚಿದಂತೆ ಅನ್ನಿಸಿತು. ವಿಮರ್ಶಕನಿಗೆ ಅವಳ ಬದುಕಿನ ಬಗ್ಗೆ ಏನುತಿಳಿದಿದೆ? ಅವನು ಕೃತಿಯನ್ನ ಮಾತ್ರ ವಿಮರ್ಶೆ ಮಾಡಬಲ್ಲ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿ ಎಂದು ಹೊರಗಿನವನಾದ ವಿಮರ್ಶಕನಿಗೆ ಜವರಲೈಸ್ ಮಾಡಿಬಿಡುವುದು ಸುಲಭ. ಆದರೆ ಸ್ವಂತ ಬದುಕು ಕೃತಿಯನ್ನ ಪ್ರಭಾವಿಸುವ ರೀತಿ, ಅದರೆ ಸಾಂದ್ರತೆ ಹೊರಗಿನವರಿಗೆ ಹೇಗೆ ತಿಳಿಯಬೇಕು ಅನ್ನಿಸಿತು. ಆದರೆ ಮನುಷ್ಯ ಮನುಷ್ಯನನ್ನು ಬದುಕಿಯೆ ಪ್ರಭಾವಿಸಬೇಕು, ಕೃತಿ, ಕಲ್ಪನೆ, ಸ್ಂಶೋಧನೆ, ಕಲೆ ಎಲ್ಲವೂ ಇನ್ನೊಬ್ಬರನ್ನ ಇಂಪ್ರೆಸ್ ಮಾಡಬಹುದು ಆದರೆ ಪ್ರಭಾವಿಸಲು ಸಾಧ್ಯವಿಲ್ಲ ಅನ್ನುವುದೂ ಹೊಳೆಯಿತು. ತಲೆಯೊಳಗೆ ಮತ್ತದೇ ರುಮುರುಮು.. ವಿಮರ್ಶಕನ ಮಾತುಗಳು ಅವಳು ಹೇಳಿದ್ದಕ್ಕೆಲ್ಲಾ ಅರ್ಥವಿಲ್ಲವೆಂಬಂತೆ, ನಿರಾಕರಿಸುವಂತೆ ತೋರುತ್ತಿತ್ತು. ವಿಮರ್ಶಕನ ಪಾಲಿಗೆ ಬರೀ ಮಹಾಭಾರತ ಇದು. ಆದರೆ ನನ್ನ ಪಾಲಿಗೆ ನನ್ನ ಕಥೆಯೂ ಅಲ್ಲವೇ? ಕೇಳಿಕೊಂಡ ಅನುಮಾನವಾಯಿತು.. ಇಷ್ಟೆಲ್ಲಾ ನನ್ನ ಭ್ರಮೆ ಮಾತ್ರವಾ? ಕಾದಂಬರಿಗೂ ನನಗೂ ನಿಜಕ್ಕೂ ಸಂಭಂಧವೇ ಇಲ್ಲವೇ? ಅರ್ಥವಾಗಲಿಲ್ಲ. ಮತ್ತೊಂದು ಸಿಗರೇಟನ್ನು ಹತ್ತಿಸಿದ.. ಅರ್ಥವಾಗದ ಯಾವುದನ್ನೂ ನಾನು ಮಾಡುವುದಿಲ್ಲ ಎನ್ನುವ ಹಳೆಯ ನಿಶ್ಚಯ ನೆನಪಾಯಿತು. ಒಳಗೆ ಬಂದರೆ ಟೀಪಾಯಿಯ ಮೇಲೆ ‘ನಾನು ಹಿಡಿಂಬೆ’ ಕಾದಂಬರಿ ಅನಾಥ ಬಿದ್ದಿತ್ತು. ಯಾರೋ ಕಲಾವಿದ ದೊಡ್ಡ ಸ್ಥನಗಳ ಸಪೂರ ಸೊಂಟದ ಬೊಗಸೆ ಕಣ್ಣುಗಳ ಕಪ್ಪಗಿನ ಸುಂದರಿಯೊಬ್ಬಳ ರೇಖಾ ಚಿತ್ರ ಬರೆದು ಮುಖಪುಟ ವಿನ್ಯಾಸ ಮಾಡಿದ್ದ.
ಶ್ರೀಧರ ತನಗೇ ಗೊತ್ತಿಲ್ಲದ ಹಾಗೆ ಅಂಗೈಯನ್ನು ಮೂಗಿನ ಹತ್ತಿರ ತಂದು ಉಸಿರೆಳೆದುಕೊಂಡ. ಇಳಾಳ ಮೈಯ್ಯ ಕಂಪು ಇನ್ನೂ ಹಾಗೇ ಇದೆ ಅನ್ನಿಸಿತು.
( ಅಕ್ಕ ವಿಶ್ವಕನ್ನಡ ಸಮ್ಮೇಳನದ ಕಥಾಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದ ಕತೆ)

Saturday, September 4, 2010

ಪಂಚರಂಗಿ ನೋಡಿದೆ...

ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್ ಗಳು,ಇಷ್ಟವಾಗುವ ಸರ್ಕಾಸ್ಟಿಕ್ ಹಾಡುಗಳು,ಜೀರ್ಣಿಸಿಕೊಳ್ಳಲಾಗದ ಸತ್ಯಗಳು,ನೈಜವೆನಿಸುವ ದಿಗಂತ್ ಆಕ್ಟಿಂಗಳು,ಎಂದಿನಂತೆ ಇಶ್ಟವಾಗುವ ಅನಂತ್ ನಾಗ್, ಸುಧಾ ಬೆಳವಾಡಿ ಇನ್ನಿತರುಗಳು, ಮರ ಸುತ್ತುವ ಕಾರ್ಯಕ್ರಮವಿಲ್ಲದೆ, ಮರ ಹತ್ತಿಸಿ, ತೀರಾ ಬೋರು ಹೊಡಿಸದೆ ಡಿಫರೆಂಟಾಗಿ ಪ್ರೀತಿ, ಮದುವೆ ಮಾಡಿಸಿದ ರೀತಿಗಳು, ಥಟ್ಟನೆ ಅರ್ಥವಾಗಿಬಿಡುವ ’ಗಿಜಿಬಿಜಿ ಆ ಆ ಆ,ಗಿರಿಗಿರಿ ಕಯ ಕಯ ಕೊ ಕೊ ಕೊ,ಲಬೊ ಲಬೋ’ಗಳು, ಹಾಡಿಗಷ್ಟೇ ಸೀಮಿತವಾಗಿದ್ದರೆ ಚನ್ನಾಗಿರುತ್ತಿದ್ದ ಕಾಯ್ಕಿಣಿ ಎಂಟ್ರೆನ್ಸ್ ಗಳು, ಹೆಚ್ಚಾಗೇ ಮೂಗು ತೂರಿಸುವ ಯೋಗ್ರಾಜ್ ಭಟ್ ಸೌಂಡುಗಳು, ಮಾಸಿಗೂ ಪಿವಿಆರ್ ಜನಕ್ಕೂ ಕೇಟರ್ ಮಾಡುವ ಸ್ಕ್ರೀನ್ ಪ್ಲೇಗಳು, ಹೇಳಿಸಿಕೊಳ್ಳುವ ಕಥೆ ಇಲ್ಲದಿದ್ದರೂ ಎರಡೂವರೆ ಗಂಟೆಕಾಲ ಎಂಟರ್ಟೈನ್ ಮಾಡಿ ಚಂದದ ಮೆಸೇಜು ರವಾನೆ ಮಾಡುವ ಯೋಗ್ರಾಜ್ ಭಟ್ಟರ ನಿರ್ದೇಶನಗಳು, ಅವರ ಚಂದದ ಸಿನಿಮಾಗಳು, ನೋಡಿಬಂದ ನಾವುಗಳು ನೋಡಿಬರಬಹುದಾದ ನೀವುಗಳು. ಮತ್ತೆ ಎಂದಿನ ಹಾಗೆ ಜೀವನ ನಡೆಸುವ ಎಲ್ಲರುಗಳು.

Sunday, April 25, 2010

ಅವನು ಪರ-ಪುರುಷ

ನಾನ್ಯಾವತ್ತೂ ಸಾವಿಗಾಗಿ ಕಾಯಲಿಲ್ಲ, ಸಾವು ‘ಹಾಗಿರತ್ತೆ, ಹೀಗಿರತ್ತೆ’ ಅಂತ ಕಲ್ಪಿಸಿಕೊಳ್ಳಲಿಲ್ಲ, ಭಯ ಪಡಲಿಲ್ಲ, ಉಲ್ಲಾಸಗೊಳ್ಳಲಿಲ್ಲ, ‘ಹೇಗೆ ಬರಬಹುದು?’ ಅಂತ ಯೋಚಿಸುತ್ತಾ ಕೂರಲಿಲ್ಲ.

ಸಾವಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅವನ ಬರವನ್ನು ಆದಷ್ಟು ಮುಂದೆ ಹಾಕಲು ಪ್ರಯತ್ನಿಸಿದೆ, ಏನೇನೋ ನಾಟಕ ಆಡಿದೆ, ಬರುವವರು ಬರದೇ ಇರುತ್ತಾರೆಯೆ? ಬಂದೇ ಬಂದ. ನಾನವನಿಗೆ ಕಾಯುತ್ತಿರಲ್ಲಿಲ್ಲ ಎಂದು ತಿಳಿದಿತ್ತೇನೋ ಎನ್ನುವಂತೆ ಹುಡುಕಿಕೊಂಡು ನನಗಾಗಿಯೇ ಬಂದ, ನನ್ನ ಹೊತ್ತೊಯ್ಯುವುದಕ್ಕೆ.

ಖುಶಿಯಾಗಿಯೇ ಇದ್ದವನು ಇದ್ದಕ್ಕಿದ್ದಂತೆ ಕೋಪಿಸಿಕೊಂಡವನಂತೆ ಒಬ್ಬನೇ ಹೊರಟು ನಿಂತ, ಯಾರೋ ಕಾಶಿಗೆ ಅಂದರು. ಖುಶಿಯಾಯಿತು ನನಗೆ. ಆದರೆ ಅಪ್ಪನೇ ಅವನ ಬಳಿ ಹೋಗಿ ರಮಿಸಿ ಕಾಲು ತೊಳೆದು ಮತ್ತೆ ಕರೆತಂದರು. ಆಮೇಲೆ ತಿಳಿಯಿತು ಅದೆಲ್ಲಾ ಸುಮ್ಮನೆಯಂತೆ ನಾಟಕವಂತೆ, ಆಟವಂತೆ. ‘ಸಾಯೋಆಟ’ದಲ್ಲಿ ಇನ್ನ್ಯಾವ ಆಟ? ಇನ್ನ್ಯಾಕೆ ಆಟ? ಯೋಚಿಸಿದೆ.

ನನಗೆ ಪುನರ್ಜನ್ಮದಲ್ಲಿ ನಂಬಿಕೆಯಿರಲಿಲ್ಲ. ರುಗ್ಣಶಯ್ಯೆಯಲ್ಲಿ ಮಲಗಿಸಿಕೊಂಡು ಇದು ಸಾವಲ್ಲ ಹೊಸ ಜನ್ಮ ಅಂತ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದ. ಎಲ್ಲಿಗೋ ಹೊರಟು ನಿಂತೆವು. ಎಲ್ಲಿಗೆ ಎಂದು ನಾನು ಕೇಳಲಿಲ್ಲ. ಪ್ರಶ್ನೆಗಳು ಆವಿಯಾಗಿ ಹೋಗಿದ್ದವು. ಉತ್ತರಗಳು ಯಾವ ವ್ಯತ್ಯಾಸವನ್ನೂ ಸೃಷ್ಟಿಸುತ್ತಿರಲಿಲ್ಲ. ಅಪ್ಪ ಅಮ್ಮ ಎಲ್ಲರೂ ಅಳುತ್ತಿದ್ದರು. ನನಗೆ ಗೊತ್ತಾಗುತ್ತಿತ್ತು "ಪುತ್ರ ಶೋಕಂ ನಿರಂತರಂ". ಮನೆಯವರಿಗೆಲ್ಲಾ ಸೂತಕ.


ಸಾವಿನ ಮನೆಯಲ್ಲಿ ನಿಶ್ಚಲ ನಿದ್ದೆ . Grave is a fine safe place but none do there embrace ಅಂದಿದ್ದ ಕವಿಮಾತು ಸುಳ್ಳಾಗಿದ್ದು ಯೋಚಿಸಿ ನಕ್ಕೆ. ನಾನು ನಕ್ಕಿದ್ದು ಇನ್ನೇನೋ ಅರ್ಥ ಕೊಟ್ಟಿರಬೇಕು ಸಾವಿನ ನಂತರದ ಯೋಚನೆಗಳೂ ‘ಬಾಹುಬಂಧನ ಚುಂಬನ’.

ಈಗೆಲ್ಲಾ ಬದಲಾಗಿ ಹೋಗಿದೆ. ಇಂಥ ಸಾವಿನಿಂದಾಗುವ ಮತ್ತೊಂದು ಹುಟ್ಟಿನ ಬಗ್ಗೆ ಅದು ಹುಟ್ಟಿದ ಕ್ಷಣದಿಂದ ಸಾವಿಗೆ ವಿವಿಧ ರೀತಿಯಲ್ಲಿ ತಯಾರಾಗುವುದರ ಬಗ್ಗೆ ಆಶ್ಚರ್ಯ ಪಡುತ್ತೇನೆ.ನಿಧಾನಕ್ಕೆ ಈ ಬದುಕು ಇಷ್ಟವಾಗುತ್ತಿದೆ. ಬದುಕು ಎಂದಾಕ್ಷಣ ಸಾವು ಆತ್ಮಹತ್ಯೆ ಮಾಡಿಕೊಂಡಿದೆ. ಈಗೆಲ್ಲಾ ಅಯೋಮಯ ‘ಹುಟ್ಟಿನಿಂದ ಸಾವಿನೆಡೆಗೆ’ ಎಂಬುದು ಸುಳ್ಳಾಗಿ, ಸಾವಿಗೆ ತಯಾರಾಗುತ್ತಿರುವ ಹೊಸಹುಟ್ಟು ನನ್ನಲ್ಲಿ ಜೀವ ಕಳೆ ತುಂಬಿದೆ. ಹುಟ್ಟುಸಾವುಗಳ ವಿಷಯಕ್ಕೇ ಹೋಗದೆ ನಿರಾತಂಕವಾಗಿದೆ. ನನ್ನ ಪ್ರತಿ ಕ್ಷಣವೂ ಜೀವಂತವಾಗಿಸುತ್ತಿದೆ. ಸಾವೆಂದುಕೊಂಡವನು ಪ್ರೀತಿಯಿಂದ ಜೀವಹಿಂಡುತ್ತಾನೆ.

ನನಗೀಗ ಪುನರ್ಜನ್ಮದಲ್ಲಿ ನಂಬಿಕೆ ಇದೆ.

Monday, April 5, 2010

ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ

ಇಷ್ಟು ಬೆಳಬೆಳಗ್ಗೆ ಕಾಲ್ ಮಾಡುತ್ತಿರೋದು ಯಾರು ಅನ್ನುವುದಕ್ಕಿಂತ, ಏನು ಸುದ್ದಿಯೊ ಅನ್ನೋ ಗಾಬರಿ ಚಕ್ರಪಾಣಿಯ ಮನಸ್ಸನ್ನು ಹೊಕ್ಕಿತು. ರೂಮಿನಲ್ಲಿ ಮಲಗಿರುವ ಹೆಂಡತಿಯನ್ನು ಏಳಿಸಲು ಮನಸಾಗಲಿಲ್ಲ, ಇನ್ನೊಂದು ರೂಮಿನಲ್ಲಿ ರಾತ್ರಿಯೆಲ್ಲಾ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ಮಗಳು ಈಗಿನ್ನೂ ಮಲಗಿದ್ದಾಳೆ, ಮತ್ತೆ ಮಗುವಿಗೆ ಎಚ್ಚರವಾದರೆ ಏನು ಗತಿ ಎಂದುಕೊಂಡು ಮಾಡುತ್ತಿದ್ದ ಟ್ಯೂಶನ್ನನ್ನು ನಿಲ್ಲಿಸಿ ಸ್ವಲ್ಪ ಭಯದಿಂದಲೇ ಫೋನ್ ಎತ್ತಿಕೊಂಡವರಿಗೆ ಕೇಳಿಸಿದ್ದು ರಂಗರಾಯರ ಪತ್ನಿ ಸೀತಮ್ಮನ ಧ್ವನಿ! ‘ಟ್ಯೂಷನ್ ಮುಗಿದಮೇಲೆ ಮನೆ ಕಡೆ ಬಂದು ಹೋಗ್ತಿರಾ, ಸ್ವಲ್ಪ ಮಾತಾಡೋದಿತ್ತು’ ಎಂದಾಗ ಚಕ್ರಪಾಣಿಗೆ ವಿಚಿತ್ರ ಅನ್ನಿಸಿದ್ದು ಮಾತ್ರವಲ್ಲ ಅವರು ಏನು ಹೇಳುತ್ತಿದ್ದಾರೆ ಎಂದೂ ಅರ್ಥ ಆಗಲಿಲ್ಲ. ‘ರಂಗರಾಯರ ಆರೋಗ್ಯ ಸರಿ ಇದೆ ತಾನೆ?’ ಎಂದು ಕೇಳಿ ಇಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಿದೆ ಎಂದುಕೊಂಡು, ಸರಿ ಬರುತ್ತೇನೆ ಎಂದು ಫೋನ್ ಇಟ್ಟು ಮತ್ತೆ ಮನೆ ಪಾಠದ ಕೋಣೆಗೆ ಬಂದರು.
‘ವೇವ್ಸ್’ ಪಾಠವನ್ನ ಅದೆಷ್ಟು ವರ್ಷಗಳಿಂದ, ಸುಮಾರು ೨೭ ಅಲ್ಲ ಅಲ್ಲ ೨೯ ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ ಮೊದಮೊದಲು ಪ್ರತೀ ನಾಲ್ಕೈದು ವರ್ಷಗಳಿಗೊಮ್ಮೆ ಸಿಲಬಸ್ ಅಪ್ಡೇಟ್ ಆಗುತ್ತಿತ್ತು. ಈ ಸಿ.ಇ.ಟಿ ಭರಾಟೆಯೆಲ್ಲ ಶುರುವಾದಮೇಲೆ ತಾವೇ ಪ್ರತೀ ವರ್ಷವೂ ಪ್ರತಿಯೊಂದು ವಿಷಯದಲ್ಲೂ ಹೊಸಾ ಬದಲಾವಣೆಗಳಾಗಿವೆಯೇ ಎಂದು ನೋಡಿ ತಿಳಿದುಕೊಳ್ಳುತ್ತಿದ್ದರು. ಪಾಠದ ಮಕ್ಕಳಿಗೆ ಸಹಾಯವಾಗಲೆಂದು. ವಿನಿತಾ ನೆನಪಾದಳು, ‘ಶುದ್ದ ಸೋಮಾರಿ, ಯಾವತ್ತೂ ಏನನ್ನೂ ಅಪ್ಡೇಟ್ ಮಾಡಿಕೊಳ್ಳೋಲ್ಲ, ನಾನೇ ಆಗಾಗ ಫೋನು ಮಾಡಿ ಹೊಸ ವಿಷಯಗಳನ್ನು ಓದು ಎಂದು ಹೇಳಿಕೊಡಬೇಕು.’ ಎಂದು ಮಗಳ ಮೇಲೆ ಹುಸಿ ಮುನಿಸು. ತಮ್ಮ ಮಗಳು ತಮ್ಮಂತೆಯೇ ಫಿಸಿಕ್ಸ್‌ನಲ್ಲಿ ಎಂ.ಎಸ್.ಸಿ ಮಾಡಿ ಅದೂ ಗೋಲ್ಡ್ ಮೆಡಲ್ ತೆಗೆದುಕೊಂಡು ಪಾಸಾದಾಗ ಉಂಟಾದ ಹೆಮ್ಮೆ ಆ ಸಂಗತಿ ಇವತ್ತಿಗೂ ತರುವ ನೆಮ್ಮದಿ ನೆನೆದು ಎದೆ ತಂತಾನೇ ಉಬ್ಬಿತು. ಇವರ ಮನಸ್ಸಿನಲ್ಲಿ ನಡೆಯುತ್ತಿರುವುದಕ್ಕೂ ಪಾಠ ಮಾಡುತ್ತಿರುವುದಕ್ಕೂ ಏನೂ ಸಂಭಂದವಿಲ್ಲವೆಂಬಂತೆ ಫ್ರೀಕ್ವೆನ್ಸಿ ವೇವ್ಲೆಂತ್ ವೆಲಾಸಿಟಿಗಳ ಬಗ್ಗೆ ಅಡೆತಡೆ ಇಲ್ಲದೆ ಹೇಳುತ್ತಾ ಅವತ್ತಿನ ಪಾಠ ಮುಗಿಸಿದರು. ಮತ್ತು ಹಾಗೆ ಮಾಡಿದ್ದಕ್ಕೆ ಅಚ್ಚರಿ ಪಟ್ಟುಕೊಂಡರು. ಮಕ್ಕಳು ಎಂದಿನಂತೆ ಅರ್ದಂಬರ್ದ ಕೇಳಿಸಿಕೊಂಡು ಅರ್ದಂಬರ್ಧ ಮಲಗಿ ಎದ್ದು ಹೋದರು, ಅವರ ನಂತರ ಇನ್ನೊಂದು ಬ್ಯಾಚು. ಆ ಬ್ಯಾಚಿನ ಮಕ್ಕಳು ಬರೋದರೊಳಗೆ ಹೆಂಡತಿ ಮಾಡಿಟ್ಟ ಹೊಸ ಹಾಲಿನ ಹಬೆಯಾಡುತ್ತಿರುವ ಕಾಫಿ ಹೀರುತ್ತಾ ‘ರಾಧಾ, ವಿನಿತಾಗೆ ಫೋನ್ ಮಾಡಿ ಒಂದೆರೆಡು ದಿನಕ್ಕೆ ಬಂದು ಹೋಗು ಅಂತ ಹೇಳು, ನೋಡಬೇಕು ಅನ್ನಿಸ್ತಿದೆ. ನಾಳೆ ಶುಕ್ರವಾರ, ಶನಿವಾರ ಹಾಫ್ ಲೀವ್ ಹಾಕಿ ಬರೋಕ್ಕೆ ಹೇಳು.’ ಅಂದು ಕಾಫಿಯ ಕೊನೆಯ ಸಿಪ್ ಹೀರಿ ಇನ್ನೊಂದು ಬ್ಯಾಚಿನ ಮಕ್ಕಳಿಗೆ ಪಾಠ ಮಾಡಲು ಹೋದರು.

ಟ್ಯೂಷನ್ ಮುಗಿಸಿ ಎಂದಿನಂತೆ ಆರಾಮಾಗಿ ಕಾಲೇಜಿಗೆ ಹೋಗಿ ಮಧ್ಯಾನ ಊಟಕ್ಕೆ ಬಂದರೆ ಸೀತಮ್ಮ ಕೂತಿದ್ದರು. ‘ಓ ಸಾರಿ ಮರೆತುಬಿಟ್ಟಿದ್ದೆ, ಕಾಲೇಜಿನಲ್ಲಿ ನೆನಪಾಯ್ತು ಸಂಜೆ ಬರೋಣ ಅಂತಿದ್ದೆ...ಊಟ ಮಾಡೋಣ ಬನ್ನಿ-’ ಎನ್ನುತ್ತಿರುವಾಗಲೇ ಅವರು ‘ನೀವು ಊಟ ಮುಗಿಸಿ’ ಎಂದಾಗ ಅವರ ಧ್ವನಿಯಿಂದಲೇ ಏನೋ ಗಂಭೀರವಾದದ್ದೇ ಆಗಿದೆ ಎಂದು ಕಸಿವಿಸಿಯಾಯಿತು. ಬಿಸಿಬೇಳೆ ಬಾತು ಮೊಸರನ್ನವನ್ನ ಹಾಕಿಕೊಡುತ್ತಾ ‘ಬೆಳಗ್ಗೇನೇ ಹೋಗೋದಲ್ವ ಏನ್ ಮರ್ವೋ ನಿಮ್ಗೆ, ಅವಾಗ್ಲಿಂದ ಕಣ್ಣಲ್ ನೀರ್ ಬಿಟ್ಕೊತಿದಾರೆ, ಮಗ್ಳಿಂದೇನೋ ತೊಂದ್ರೆ ಆಗಿದೆ ಏನು ಅಂತ ವಿವರವಾಗಿ ತಿಳ್ಕೊಳಿ’ ಎಂದು ಸಿಡುಕಿದರು ರಾಧಾ.

* *
ಆಟೋ ಸದ್ದಾಗಿದ್ದು ಕೇಳುತ್ತಲೇ ವಿನಿ ಬಂದಳು ಅಂತ ದೊಡ್ಡ ಮಗಳು ಸುನಿತಾ ಬಾಗಿಲು ತೆರೆಯಲು ಹೋದಳು. ‘ಹಸೀ ಬಾಣಂತಿ ಹಿಂಗೆ ಗಾಳಿಗೆ ಹೋಗ್ತಿಯಲ್ಲ ಚೂರು ಭಯ ಇಲ್ಲ’ ಬೈದರು ಅಮ್ಮ. ಚಕ್ರಪಾಣಿ ಮಗಳನ್ನು ನೋಡಿದರು ‘ಸ್ವಲ್ಪ ದಪ್ಪಗಾಗಿದಾಳೆ’. ಬೆಂಗಳೂರು ಪ್ರಭಾವ ಅಂದುಕೊಂಡು ಕೆಲಸ ಹೇಗೆ ಆಗುತ್ತಿದೆ, ಕಾಲೇಜಿನಲ್ಲಿ ಏನು ತೊಂದರೆ ಇಲ್ಲವಲ್ಲ? ಎಷ್ಟು ಪಾಠ ಮುಗಿಸಿದ್ದಾಳೆ? ಮಕ್ಕಳು ಚುರುಕಿದ್ದಾರ? ಎಂದೆಲ್ಲಾ ವಿಚಾರಿಸಿಕೊಂಡರು. ಫೋನಿನಲ್ಲೇ ಎಲ್ಲಾ ಹೇಳಿ-ಕೇಳಿಯಾಗಿದ್ದರೂ ಮತ್ತೆ ಮತ್ತೆ ‘ಇನ್ನೇನು ವಿಷಯ’ ‘ಇನ್ನೇನು ವಿಷಯ’ ಅಂತ ಅಮ್ಮ ಮಗಳು ಮಾತಾಡಿಕೊಂಡರು. ರಾತ್ರಿ ಪಕ್ಕ ಮಲಗಿದ ಹೆಂಡತಿಯನ್ನು ಇನ್ನೇನಂತೆ ಎಂದು ಕೇಳಿದಾಗ ಮಗಳನ್ನು ಐ.ಎ.ಎಸ್ ಹುಡುಗನೊಬ್ಬ ಇಷ್ಟಪಟ್ಟು ಮದುವೆಗೆ ಪ್ರಪೋಸ್ ಮಾಡಿದ್ದಾನೆ ಇವಳು ಮನೆಯಲ್ಲಿ ಕೇಳಬೇಕು ಅವರು ಒಪ್ಪಿದರೆ ಪರವಾಗಿಲ್ಲ ಎಂದು ಹೇಳಿ ಬಂದಿದ್ದಾಳೆ ಎಂಬ ಸಂಗತಿಯನ್ನ ಹೆಂಡತಿ ಹೀಗೆ ನಿರುಮ್ಮಳವಾಗಿ ಹೇಳಿ ನಿದ್ದೆ ಹೋಗಿಬಿಡುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ... ನಿದ್ದೆ ಹಾರಿ ಹೋಯಿತು.

ಬೆಳಗ್ಗೆ ರಂಗರಾಯರ ಮನೆಯಲ್ಲಿ ಮಾತಾಡಿದ್ದನ್ನು ಮನಸ್ಸಿನಲ್ಲೇ ಮೆಲಕು ಹಾಕುತ್ತಾ, ಅವರ ಮಗಳು ಶ್ವೇತಾಳಿಗೆ ಗಂಡು ಹುಡುಕಲು ಶುರು ಮಾಡಿದ ಸಂಧರ್ಭವನ್ನು ನೆನಪಿಸಿಕೊಂಡರು. ಮುದ್ದಾಗಿ ಬೆಳೆದ ಹುಡುಗಿಯ ಚರ್ಮದ ಮೇಲೆ ಅಲ್ಲಲ್ಲಿ, ಬೆರಳ ತುದಿ, ತುಟಿಯ ಕೊನೆ, ಪಾದದ ಮಧ್ಯೆ ಸಣ್ಣದಾಗಿ ಚರ್ಮ ಬಿಳಿಯಾಗಲು ಶುರುವಾದಾಗ ಸೀತಮ್ಮ ಘಾಬರಿಯಾಗಿ ಔಶಧಿಗಳನ್ನ ಮಾಡಲು ಶುರು ಮಾಡಿದ್ದು, ಸ್ಪೆಶಲಿಷ್ಟುಗಳಿಗೆ ತೋರಿಸಿದ್ದು, ಧರ್ಮಸ್ಥಳದ ಶಾಂತಿವನದಲ್ಲಿ ತಿಂಗಳುಗಟ್ಟಲೆ ಪ್ರಕೃತಿ ಚಿಕಿತ್ಸೆ ಕೊಡಿಸಿದ್ದು ನಿರೀಕ್ಷಿಸಿದಷ್ಟು ಫಲ ಕೊಡಲಿಲ್ಲ. ವಯಸ್ಸು ೨೭ ಆದರೂ ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಸಾಕಾಗಿಹೋಗಿದ್ದ ರಂಗರಾಯರು ಕೊನೆಯ ಪ್ರಯತ್ನವೆಂಬಂತೆ ‘ಟೈಮ್ಸ್ ಆಫ್ ಇಂಡಿಯಾ’ ‘ಇಂಡಿಯನ್ ಎಕ್ಸಪ್ರೆಸ್ಸ್’ ಪೇಪರುಗಳ ಮ್ಯಾಟ್ರಿಮೋನಿಯಮ್ ಕಾಲಮ್ಮಿನಲ್ಲಿ ಮಗಳ ಹೆಸರನ್ನು ಸೇರಿಸಿದರು, ಏನನ್ನೂ ಮುಚ್ಚಿಡಲಿಲ್ಲ. ಮಗಳಿಗೆ ಹೀಗಾಗಿದೆ ಆದರೆ ಒಳ್ಳೆಯ ಕೆಲಸದಲ್ಲಿದ್ದಾಳೆ, ಸ್ಟೇಟ್ ಬ್ಯಾಂಕಿನಲ್ಲಿ ಆಫೀಸರ್, ಚನ್ನಾಗಿ ಓದಿಕೊಂಡಿದ್ದಾಳೆ, ಅದ್ಭುತವಾಗಿ ಅಡುಗೆ ಮಾಡುತ್ತಾಳೆ ಇತ್ಯಾದಿ ಇತ್ಯಾದಿ. ಯಾರಿಂದಾದರೂ ಉತ್ತರ ಬರುತ್ತೆ ಅಂತ ಉಹುಂ ಸತ್ಯವಾಗಲೂ ಅಂದುಕೊಂಡಿರಲಿಲ್ಲ... ಕೆಲವರಿಗೆ ಎಷ್ಟು ಹುಡುಕಿದರೂ ಸಿಗೋದಿಲ್ಲ, ಕೆಲವು ಮಕ್ಕಳು ತಾವೇ ಹುಡುಕಿಕೊಂಡುಬಿಡುತ್ತವೆ...

ಇತ್ತ ವಿನಿತಾಗೂ ನಿದ್ದೆ ಬರಲಿಲ್ಲ ಅಮ್ಮ ಹೇಳಿದ ವಿಷಯ ಮನಸ್ಸು ಕೆಡೆಸಿತ್ತು. ಅವನು ಬಂದು ಹೋದ ದಿನ ಶ್ವೇತ ಎಷ್ಟು ಖುಶಿಯಾಗಿದ್ದಳು ಎಂದುಕೊಳ್ಳುತ್ತಾ ವಿನಿತಾ ಅವತ್ತಿನ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದಳು. ಶ್ವೇತಾ ಖುಷಿಯಲ್ಲಿ ಒಂದು ಹೆಜ್ಜೆಗೆ ನಾಲ್ಕು ಹೆಜ್ಜೆ ಹಾರುತ್ತಾ ಮನೆಯೊಳಗೆ ಬರುತ್ತಲೇ “ಇವತ್ತು ಒಬ್ಬ ಬಂದಿದ್ದ ಕಣೇ ‘ಚಿರಾಗ್’ ಅಂತ ಹೆಸರು ‘ಚಿರಾಗ್ ವಸಿಷ್ಠ’ ” ಅನ್ನುತ್ತಾ ಸಂಭ್ರಮಿಸಿದ್ದು ನೆನಪಾಯಿತು. ಶ್ವೇತಾಳ ಅಪ್ಪ ಅಮ್ಮ ಅವತ್ತು ಯಾವುದೋ ಮದುವೆಗೆ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಇವಳೊಬ್ಬಳೇ. ಯಾವುದೋ ಹಳೇ ಸಿನೆಮಾ ನೋಡುತ್ತಾ ಕೂತಿದ್ದಳಂತೆ. ಆಗ ಕಾಲಿಂಗ್ ಬೆಲ್ ಸದ್ದಾಗಿದ್ದು ಕೇಳಿಸಿತು. ಬಾಗಿಲು ಹೋಗಿ ತೆರೆದರೆ ಇವಳನ್ನು ಗುರುತಿಸಿದ್ದು ಅವನು. ‘ಪೇಪರಿನಲ್ಲಿ ಮ್ಯಾಟ್ರಿಮೋನಿಯಲ್ ಆಡ್ ನೋಡಿದೆ ನನ್ನ ಹೆಸರು ಚಿರಾಗ್ ಅಂತ.’ ಎಂದು ಅವನು ಪರಿಚಯ ಮಡಿಕೊಂಡ ತಕ್ಷಣ ಇವಳಿಗೆ ಛೆ! ನಾನು ನೈಟಿಲಿರಬಾರದಿತ್ತು ಅನ್ನಿಸಿತ್ತು. ಹಾಗೆ ಬಂದವನು ಇವಳಿಗೆ ಇಷ್ಟವಾಗಿ ಹೋಗಿದ್ದ. ಮೊದಲ ದಿನವೇ ಬಹಳಷ್ಟು ಮಾತಾಡಿಕೊಂಡಿದ್ದರು. ಚನ್ನೈನಿಂದ ಮತ್ತೆ ಬರೋದು ಕಷ್ಟ, ಫೋಟೋ ಮೈಲ್ ಮಾಡ್ತಿನಿ. ನಿಮ್ಮ ಅಪ್ಪ ಅಮ್ಮ ಒಪ್ಪಿಗೆ ಕೊಟ್ರೆ ಫೋನ್‌ನಲ್ಲಿ ಮಾತಾಡೋಣ ಅಂತ ಹೇಳಿ ಹೋಗಿದ್ದ. ‘ಅಷ್ಟು ಚನ್ನಾಗಿದಾನೆ. ಸಬ್ ಇನ್ಸ್‌ಪೆಕ್ಟರ್ ಬೇರೆ. ಹೇಗಿದಾನೆ ಗೊತ್ತಾ ಮ್ಯಾನ್ಲಿ ಆಗಿ. ನನ್ನ ಇಷ್ಟ ಪಟ್ಟು ಹುಡುಕೊಂಡು ಬಂದಿದಾನೆ ನೋಡು. ನನ್ನ ಕ್ವಾಲಿಟೀಸ್ ಎಲ್ಲಾ ಇಷ್ಟ ಆಯ್ತಂತೆ’ ಅಂತವಳು ಖುಷಿ ಪಡುತ್ತಿದ್ದರೆ ವಿನಿತಾಗ್ಯಾಕೋ ಅನುಮಾನವಾಗುತ್ತಿತ್ತು. ‘ಎನೇ ಇರ್ಲಿ ಶ್ವೇತಾ ಯಾರನ್ನೂ ಹಾಗೆ ನಂಬಬೇಡ ಅವನ ಬಗ್ಗೆ ಎಲ್ಲಾ ವಿಚಾರಿಸೋಕ್ಕೆ ಹೇಳು,’ ಅನ್ನುವ ವಿನಿತಾಳ ಎಚ್ಚರಿಕೆಯ ಮಾತುಗಳಿಗೆ, ‘ಇಲ್ಲ ಕಣೇ, ಅವನು ಖಂಡಿತ ಸುಳ್ಳು ಹೇಳ್ತಿಲ್ಲ ನಂಗೊತ್ತು. ನಾಳೆ ಫೊಟೋ ಮೈಲ್ ಮಾಡ್ತಾನಲ್ಲ ನೋಡು ಬೇಕಾದ್ರೆ. ಅಷ್ಟಕ್ಕೂ ಅವ್ನ ಬಗ್ಗೆ ಎಲ್ಲಾ ಪ್ರೂಫ್ ಕೊಟ್ಟು ಹೋಗಿದಾನೆ ಕಣೇ. ನಾನೇ ಅವ್ನು ಕೆಲ್ಸ ಮಾಡೋ ಪೋಲಿಸ್ ಡಿಪಾರ್ಟ್ಮೆಂಟ್‌ಗೆ ಫೋನ್ ಮಾಡಿ ಯಾರೋ ಬೇರೆಯವರು ವಿಚಾರಿಸೋ ಥರ ವಿಚಾರಿಸಿ ನೋಡ್ದೆ. ಅವ್ನು ಹೇಳಿರೋ ಇನ್ಫರ್ಮೇಷನ್ ಎಲ್ಲಾ ಕರೆಕ್ಟು.’ ಅಂದ್ಲು. ಆದರೂ ವಿನಿತಾಗೆ ಸಮಾಧಾನವಿರಲಿಲ್ಲ. ‘ಯಾವುದಕ್ಕೂ ಜೋಪಾನ ಅಪ್ಪ ಅಮ್ಮ ಏನಂದ್ರು’ ಕೇಳಿದಳು. ಅವರಪ್ಪ ಅಮ್ಮನಿಗೂ ಸ್ವಲ್ಪ ಅನುಮಾನ ಇದ್ದೇ ಇತ್ತು. ಇವಳು ಫೋಟೋ ತೋರಿಸಿದ್ದಳು. ವಿನಿತಾಗಂತೂ ಫೋಟೋ ನೋಡಿದ ಕೂಡಲೇ ಇವನನ್ನೆಲ್ಲೋ ನೋಡಿದೀನಿ ಅನ್ನಿಸಿತು. ಆದರೆ ಯಾರಿರಬಹುದು ಎಂದು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಮಾರನೇ ದಿನ ಇವಳು ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಬಂದಾಗ ಇವಳಮ್ಮ ಇವಳನ್ನು ತಬ್ಬಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಂಡಿದರು. ಚಿರಾಗ್ ವಸಿಷ್ಠ ಶ್ವೇತಾಳ ತಾಯಿ ತಂದೆಯ ಜೊತೆ ಫೋನ್‌ನಲ್ಲಿ ಮಾತಾಡಿದ್ದ. ‘ನನಗೆ ಪರಿಚಯ ಮಾಡಿಸಿಕೊಡೇ..’ ಅಂತ ವಿನಿ ಅವಳನ್ನು ಗೋಳುಹುಯ್ದುಕೊಂಡ ಮರುದಿನವೇ ವಿನಿತಾಗೂ ಅವನಿಂದ ಕಾಲು ಬಂದಿತ್ತು. ಯಾಕೋ ಧ್ವನಿ ಸ್ವಲ್ಪ ಕೀರಲು ಅನ್ನಿಸುತ್ತಿದ್ದರೂ ಅವನು ಮಾತಾಡುತ್ತಿದ್ದ ಧಾಟಿ ಖುಷಿ ಕೊಡುತ್ತದೆ ಅಂದುಕೊಂಡಳು.

ಶ್ವೇತಾಳಿಗೆ ತಿಂಗಳಿಗೊಂದು ಗಿಫ್ಟು ಬರಲು ಶುರುವಾಯಿತು. ಚಿನ್ನದ ಸರ, ಬಳೆ ಹೀಗೇ.. ಇಷ್ಟು ದಿನವಾದರೂ ಚಿರಾಗ್‌ನನ್ನು ಬಿಟ್ಟರೆ ಅವರ ಮನೆಯವರ್ಯಾರೂ ಶ್ವೇತಾಳ ಮನೆಯವರ ಬಳಿ ಮಾತಾಡಿರಲಿಲ್ಲ. ಅವನಿಗೆ ತಂದೆ ತಾಯಿ ಇಲ್ಲ. ಇರುವ ಸಂಭಂದಿಕರಾದ ಚಿಕ್ಕಪ್ಪ ಚಿಕ್ಕಮ್ಮ ಅಮೇರಿಕಾದಲ್ಲಿದ್ದರು. ಆರು ತಿಂಗಳಾದಮೇಲೆ ಬರ್ತಾರೆ ಆಗ ಮನೆಗೇ ಬಂದು ಮಾತಾಡ್ತಾರೆ ಅಂದಿದ್ದ. ಅದ್ಯಾಕೋ ಏನೇನೋ ಕಾರಣಗಳಿಂದ ಶ್ವೇತಾಳ ಅಪ್ಪ ಅಮ್ಮನಿಗೆ ಅವನನ್ನು ಮುಖತಹ ಭೇಟಿ ಮಾಡಲಾಗಿರಲೇ ಇಲ್ಲ. ಇವಳೇ ಬ್ಯಾಂಕಿನ ಕೆಲಸದ ಮೇಲೆ ಬೆಂಗಳೂರಿಗೆ ಹೋದಾಗ ಅವನೂ ಚನ್ನೈಯಿಂದ ಬರುತ್ತಿದ್ದ ಹೀಗೆ ಆಗಾಗ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಎಂಟು ತಿಂಗಳಾದರೂ ಅವನ ಚಿಕ್ಕಪ್ಪ ಚಿಕ್ಕಮ್ಮ ಬರುವ ಸುದ್ದಿಯೇ ಇರಲಿಲ್ಲ. ರಂಗರಾಯರಿಗೆ ಅನುಮಾನವಾಗಿ, ಶ್ವೆತಾಳಿಗೆ ಗೊತ್ತಾಗದಂತೆ ಚಿನ್ನದಂಗಡಿಗೆ ಹೋಗಿ ಅಸಲಿ ಒಡವೆಯೋ ನಕಲಿಯೋ ಎಂದು ತೊರಿಸಿಕೊಂಡು ಬಂದರು. ಚಿನ್ನದ ಒಡವೆಗಳೇ. ಮೋಸಮಾಡುವ ಪೈಕಿಯಾದರೆ ಹಾಗೆ ಚಿನ್ನದ ಒಡವೆಗಳನ್ನ ದುಬಾರಿ ವಸ್ತುಗಳನ್ನ ಯಾಕೆ ಕಳುಹಿಸುತ್ತಾರೆ ಅಂದುಕೊಂಡು ಸುಮ್ಮನಾದರು. ಅದಲ್ಲದೇ ಅವನು ಇವರಿಗೆ ಹದಿನೈದು ದಿನಕ್ಕೊಂಮ್ಮೆ ತಪ್ಪದೇ ಮಾತಾಡುತ್ತಿದ್ದ. ಹೀಗೆ ಎಷ್ಟು ದಿನಗಳಾದರೂ ಅವರ ಮನೆಯವರು ಮದುವೆಯ ಬಗ್ಗೆ ಸುದ್ದಿಯೇ ಎತ್ತಿರಲಿಲ್ಲ.

ಮೊನ್ನೆ ಅನುಮಾನವಾಗಿ ಏನಾದರಾಗಲಿ ಹೋಗಿ ಮಾತಾಡಿಸಿಕೊಂಡು ಬರೋಣ ಅಂತ ರಂಗರಾಯರು ಯಾರಿಗೂ ಹೇಳದೇ ಅವನಿರುವ ಊರಿಗೆ, ಅಲ್ಲಿನ ಪೋಲೀಸ್ ಸ್ಟೇಶನ್‌ಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಚಿರಾಗ್ ಎನ್ನುವ ಹೆಸರಿನವರು ಯಾರೂ ಇಲ್ಲ. ಬೇರೆ ಯಾವುದೋ ಮನುಷ್ಯ ಕೂತಿದ್ದಾನೆ. ಫೋಟೋಲಿ ನೋಡಿದ ಮನುಷ್ಯನಿಗೂ ಇವನಿಗೂ ಯಾವುದೇ ಸಂಭಂಧ ಇಲ್ಲ. ರಂಗರಾಯರಿಗೆ ನಾವು ಮೋಸ ಹೋದೆವು ಎಂದು ತಿಳಿದುಹೋಯಿತು. ಘಾಬರಿಗೊಂಡು ಅಲ್ಲೆಲ್ಲಾ ವಿಚಾರಿಸಿ ಸುತ್ತಾಡಿ ಹುಡುಕಾಡಿದ್ದಾರೆ ಆ ಮುಖದ ಮನುಷ್ಯನ ಸುಳಿವೇ ಇಲ್ಲ ಎಂದು ತಿಳಿದ ಮೇಲೆ ರಾತ್ರಿ ಹೆಂಡತಿಗೆ ಕಾಲ್ ಮಾಡಿದ್ದಾರೆ. ಮಗಳಿಗೆ ಈ ವಿಷಯವನ್ನು ತಿಳಿಸುವುದು ಹೇಗೆ ಎಂದು ತಲೆಕೆಡಸಿಕೊಂಡು ಬೆಳಗಿನವರೆಗೂ ನಿದ್ದೆಗೆಟ್ಟ ಸೀತಮ್ಮ ಬೆಳಗಾಗುತ್ತಲೇ ಚಕ್ರಪಾಣಿಯವರಿಗೆ ಫೋನ್ ಮಾಡಿದ್ದಾರೆ.

ಸೀತಮ್ಮನನ್ನು ಮಾತಾಡಿಸಲು ಬಂದ ಚಕ್ರಪಾಣಿಗೆ ಇವರು ಮೋಸ ಹೋಗಿದ್ದಾರೆ ಎಂದು ಮನಸ್ಸಿನಲ್ಲಿ ಧೃಢವಾಗುತ್ತಿರುವಾಗಲೇ ಶ್ವೇತಾ ಬ್ಯಾಂಕಿನಿಂದ ಮನೆಗೆ ಬಂದಿದ್ದಾಳೆ. ಅವನ ಜೊತೆ ಮಾತಾಡಿಕೊಂಡು ಬಂದವಳು, ಇವರನ್ನು ನೋಡಿದ ತಕ್ಷಣ ‘ಇನ್ನೊಂದ್ ಸ್ವಲ್ಪ ಹೊತ್ತು ಬಿಟ್ಟು ಮಾತಾಡ್ತಿನಿ ಕಣೋ, ಎಂದು ಫೋನಿನಲ್ಲಿ ಹೇಳಿ. ‘ಹೇಗಿದೀರಾ ಅಂಕಲ್? ವಿನಿತಾ ಬಂದಿದಾಳ?’ ಎಂದು ವಿಚಾರಿಸಿಕೊಂಡು ‘ಚಿರಾಗ್ ಫೋನ್ ಮಾಡಿದ್ದ ಅಮ್ಮ, ಯಾವ್ದೋ ಹೊಸಾ ಮಾಡಲ್ ಮೊಬೈಲ್ ಬಂದಿದಿಯಂತೆ ೧೭ಸಾವರದ್ದು ನಿಂಗೆ ಕೊಡ್‌ಸ್ತಿನಿ ಅಂದ’ ಎಂದು ಹೇಳುತ್ತಿದ್ದರೆ ಸೀತಮ್ಮನೂ ಚಕ್ರಪಾಣಿಯೂ ಘಾಬರಿಯಿಂದ ಕಕ್ಕಾಬಿಕ್ಕಿಯಾಗಿ ಕೂತಿದ್ದರು.

ವಿನಿತಾಗೆ ತಲೆ ಚಿಟ್ಟುಹಿಡಿಯುವಷ್ಟು ಹಿಂಸೆಯಾಗುತ್ತಿತ್ತು. ಶ್ವೇತಾಳ ಕಷ್ಟಗಳನ್ನ, ಅವಳು ತನ್ನ ಚರ್ಮದ ಖಾಯಿಲೆಯಿಂದ ಅನುಭವಿಸುತ್ತಿದ್ದ ಅವಮಾನವನ್ನ ಹತ್ತಿರದಿಂದ ನೊಡಿದ್ದ ಅವಳಿಗೆ ಶ್ವೇತಾ ಈಗ ಇನ್ನೊಂದು ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿತು. ನಾಳೆ ರಂಗರಾಯರ ಮನೆಗೆ ಅಪ್ಪನ ಜೊತೆ ತಾನೂ ಹೋಗಬೇಕು ಅಂತ ನಿಶ್ಚಯಿಸಿಕೊಂಡಳು.
* * *

ರಂಗರಾಯರು ಮನೆಗೆ ಬಂದಮೇಲೆ ಅವನ ಬಗ್ಗೆ ಇನ್ಯಾವುದಾದರೂ ಇನ್ಫರ್ಮೇಶನ್ ಸಿಗಬಹುದಾ ಎಂದು ತಿಳಿಯಲು ಶ್ವೇತಾ ಮನೆಯಲ್ಲಿಲ್ಲದಿರುವ ಹೊತ್ತಿನಲ್ಲಿ ಅವಳ ಬೀರುವನ್ನ ಜಾಲಾಡಿದ್ದಾರೆ ಅಲ್ಲಿ ಅವರಿಗೆ ಸಿಕ್ಕಿದ್ದು ಕ್ರೆಡಿಟ್ ಕಾರ್ಡಿನ ಬಿಲ್ಲುಗಳು, ಆ ಬಿಲ್ಲುಗಳಲ್ಲಿ ಅವನು ಇವಳಿಗೆ ಕಳಿಸಿದ ಒಡವೆಗಳ ವಿವರಗಳಿವೆ ಎಲ್ಲಿ, ಯಾವತ್ತು ತೆಗೆದುಕೊಂಡಿದ್ದು? ಎಷ್ಟು ಬೆಲೆ ಇತ್ಯಾದಿ. ಎಲ್ಲವೂ ಶಿವಮೊಗ್ಗದ ಅಡ್ರಸ್ಸುಗಳೇ ಇವಳ ಕ್ರೆಡಿಟ್ ಕಾರ್ಡಿನಿಂದಲೇ ಪೇ ಆಗಿದೆ. ಇವಳಿವಳಿಗೇ ಇವಳು ಆ ಒಡವೆಗಳನ್ನು ಕೊರಿಯರ್ ಮಾಡಿರುವ ಚೀಟಿಗಳು. ಹುಡುಗರು ಹಾಕಿಕೊಳ್ಳುವಂಥಾ ಪ್ಯಾಂಟು ಶರ್ಟುಗಳು. ರಂಗರಾಯರಿಗೆ ಶಾಕ್ ಆಗಿ ಹೋಯಿತು ಮಗಳು ಮೋಸ ಮಾಡುತ್ತಿದ್ದಾಳ? ಅಥವ ಮಗಳಿಗೆ ಹುಚ್ಚು ಹಿಡಿದಿದೆಯಾ? ಏನೂಂದೂ ಅರ್ಥವಾಗಲಿಲ್ಲ. ವಿನಿತಾ ಮತ್ತು ಚಕ್ರಪಾಣಿ ರಂಗರಾಯರ ಮನೆಗೆ ಬರುವ ಹೊತ್ತಿಗೆ ರಂಗರಾಯರು ಟೇಬಲ್ಲಿನ ಮೇಲೆ ಕೊರಿಯರ್ ಚೀಟಿಗಳು ಕ್ರೆಡಿಟ್ ಕಾರ್ಡಿನ ಬಿಲ್ಲುಗಳನ್ನು ಹರಡಿಕೊಂಡು ಕೂತಿದ್ದರು.

ನಡೆದದ್ದನ್ನು ವಿವರಿಸಿದಾಗ ಚಕ್ರಪಾಣಿಗೂ ತಲೆನೋವು ಶುರುವಾಯಿತು. ‘ಚಿರಾಗ್‌ನನ್ನು ಎಲ್ಲೋ ನೋಡಿದ್ದೆ ಅಂತ ನೆನಪು ಎಲ್ಲಿ ಅಂತ ಎಷ್ಟು ಯೋಚಿಸಿದರೂ ಗೊತ್ತಾಗುತ್ತಿಲ್ಲ’ ಅಂದಳು ವಿನಿತಾ. ಹಾಗಾದರೆ ಚಿರಾಗ್ ಇರುವುದು ನಿಜ ಆದರೆ ಅವನು ಪೋಲೀಸ್ ಅಲ್ಲ. ನಮ್ಮ ಹುಡುಗಿಯ ತಲೆಕೆಡಸಿದ್ದಾನೆ ಇವತ್ತು ಎಲ್ಲದಕ್ಕೂ ಒಂದು ಅಂತ್ಯ ಕಾಣಿಸಬೇಕು ಶ್ವೇತಾಳನ್ನ ನೇರವಾಗಿ ಕೇಳಿಬಿಡೋಣ ಏನಾದರಾಗಲಿ ಅಂತ ನಿಶ್ಚಯಿಸಿದರು. ಅವಳು ಮನೆಗೆ ಬರುವವರೆಗೂ ಏನಾಗಿರಬಹುದು? ಹೇಗೆ ಪಾಪದ ಹುಡುಗಿ ಮೋಸ ಹೋಗಿರಬಹುದು? ಅಂತ ಮಾತಾಡಿಕೊಂಡರು. ಸೀತಮ್ಮ ಸದ್ದಿಲ್ಲದೆ ಬಿಕ್ಕುತ್ತಿದ್ದರು. ಸಮಯ ಸಾಗುತ್ತಲೇ ಇಲ್ಲವೇನೋ ಅನ್ನಿಸುತ್ತಿತ್ತು. ಕೊನೆಗೆ ಆರುಗಂಟೆಯ ವೇಳೆಗೆ ಶ್ವೇತಾ ಎಂದಿನಂತೆ ಫೋನಿನಲ್ಲಿ ಚಿರಾಗ್ ಜೊತೆ ಮಾತಾಡಿಕೊಂಡು ಬಂದಳು, ವಿನಿತಾಳ ಮುಖ ನೋಡಿ ಅವಳ ಕಣ್ಣರಳಿತು ವಿನಿತಾ ಪೇಲವವಾಗಿ ನಕ್ಕಳು, ಅಲ್ಲಿಯವರೆಗೂ ಒಂದೂ ಮಾತಾಡದೆ ಕುಳಿತಿದ್ದ ಸೀತಮ್ಮ ಬಿಕ್ಕುತ್ತಾ ‘ಏನೇ ಶ್ವೇತಾ ಇದು ನಿನಗೆ ನೀನೇ ಒಡವೆಗಳನ್ನು ಕಳಿಸಿಕೊಂಡಿದ್ದೀಯಾ..’ ಎಂದು ಅವಳ ಮುಂದೆ ಆ ಎಲ್ಲಾ ಚೀಟಿಗಳನ್ನು ಹಿಡಿದರು ಶ್ವೇತಾಳ ಮುಖದಲ್ಲಿ ಆಶ್ಚರ್ಯ. ಅವಳ ರೂಮಿನಿಂದ ಹುಡುಗರು ಹಾಕಿಕೊಳ್ಳೋ ಪ್ಯಾಂಟ್, ಟಿ ಷರ್ಟ್, ಕ್ಯಾಪ್‌ಗಳನ್ನು ತಂದ ರಂಗರಾಯರು ಅವುಗಳನ್ನು ಶ್ವೆತಾಳ ಮುಂದೆ ಹಿಡಿದರು. ಶ್ವೇತಾಳ ಚಹರೆ ಬದಲಾಯಿತು ರಂಗರಾಯರ ಕುತ್ತಿಗೆ ಹಿಸುಕುತ್ತಾ ‘ಶ್ವೇತಂಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ‘ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ಅಂತ Pರುಚಿಕೊಂಡಳು. ಅವಳ ಕೈಯಿಂದ ರಂಗರಾಯರನ್ನು ಬಿಡಿಸುವ ಹೊತ್ತಿಗೆ ವಿನಿತಾ ಚಕ್ರಪಾಣಿ ಸೀತಮ್ಮ ಸೋತು ಹೋಗಿದ್ದರು. ಚಕ್ರಪಾಣಿ ಕೊಟ್ಟ ಹೊಡೆತಕ್ಕೆ ಶ್ವೇತ ತಲೆತಿರುಗಿ ಬಿದ್ದಿದ್ದಳು. ಸೀತಮ್ಮ ಆದ ಘಾಬರಿಗೆ ಬಿಕ್ಕುವುದನ್ನು ನಿಲ್ಲಿಸಿದ್ದರು. ಶ್ವೇತಾಳ ವರ್ತನೆ ಅರ್ಥವೇ ಆಗದೆ ರಂಗರಾಯರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಭೂತ ಪ್ರೇತಗಳು ಇರೋದು ನಿಜವಿರಬಹುದಾ ಎಂಬ ಅನುಮಾನಕ್ಕೆ ತುತ್ತಾದರು. ಚಕ್ರಪಾಣಿ, ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ ಅಂತ ಅವಳೇ ಅವಳ ಬಗ್ಗೆ ಹೇಳುತ್ತಿದ್ದರ ಅರ್ಥವೇನು? ಪ್ರಶ್ನೆಯಾಗುತ್ತಿದ್ದರೆ ವಿನಿತಾಗೆ ನೆನಪಾದದ್ದು ಡಾ.ಕೌಶಿಕ್. ಪಿ.ಯು.ಸಿ ಯಲ್ಲಿ ಚಕ್ರಪಾಣಿಯವರ ಟ್ಯೂಶನ್ನಿಗೆ ಬರುತ್ತಿದ್ದ ಹುಡುಗ ಎಂ.ಬಿ.ಬಿ.ಎಸ್ ಮುಗಿಸಿ ಸೈಕ್ಯಾಟ್ರಿಯಲ್ಲಿ ಪಿಜಿ ಮುಗಿಸಿ ಶಿವಮೊಗ್ಗದ ಮಾನಸಾದಲ್ಲಿ ಸೈಕ್ಯಾಟ್ರಿಸ್ಟ್ ಆಗಿದ್ದ. ಅವನು ಪಿ.ಯು.ಸಿ ಯಲ್ಲಿ ವಿನಿತಾಳ ಕ್ಲಾಸ್ ಮೇಟ್ ಕೂಡಾ ಆಗಿದ್ದ. ಅವನಿಗೆ ಫೋನ್ ಮಾಡಿ ನೆಡದದ್ದನ್ನು ತಿಳಿಸಿದರು. ಕೌಶಿಕ್ ಅಲ್ಲಿನ ಡಾಕ್ಟರ್ ಒಬ್ಬರಿಗೆ ಫೋನ್ ಮಾಡಿ ಮತ್ತು ಬರುವ ಇಂಜೆಕ್ಷನ್ ಕೊಡಲು ಹೇಳಿ ತಕ್ಷಣ ಶ್ವೇತಾಳನ್ನು ಮಾನಸಾಕ್ಕೆ ಕರೆದುಕೊಂಡು ಬರಲು ಹೇಳಿದ.

* * *
ಚಕ್ರಪಾಣಿ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳದೆ ಏನೂ ಇಲ್ಲ, ಅದರ ಬಗ್ಗೆ ಬಂದಿದ್ದ ಅನ್ನಿಯನ್ ಸಿನಿಮಾವನ್ನ ವಿನಿ ಬಲವಂತ ಮಾಡಿ ತೋರಿಸಿದ್ದಳು, ಅದಲ್ಲದೆ ಸಿಡ್ನಿ ಶಲ್ಡನ್ ಎಂಬ ಲೇಖಕನ ‘ಟೆಲ್ ಮೆ ಯುವರ್ ಡ್ರೀಮ್ಸ್’ ಕಾದಂಬರಿಯೂ ಇದಕ್ಕೆ ಕುರಿತಾದದ್ದೇ.. ಆದರೆ? ‘ಆದರೆ ಇದೆಂತಾ ರೀತಿಯದ್ದು, ನಾನು ಇಂಥಾ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳೇ ಇಲ್ಲವಲ್ಲ? ಪ್ರಶ್ನೆಯಾದರು. ಸರ್ ಇದು ಡಿಸೋಸಿಯೇಟಿವ್ ಡಿಸಾರ್ಡಗಳ ರೀತಿಯಲ್ಲಿ ಒಂದು ಬಗೆ.. ವಿವರಿಸಲು ತೊಡಗಿದ ಕೌಶಿಕ್.. ಡಿಸೋಸಿಯೇಟಿವ್ ಡಿಸಾರ್ಡರ್ ಅಂದ್ರೆ ಇದರಲ್ಲಿ ಮೂರು ವಿಧ ಅಮ್ನೇಶ್ಯ ಫ್ಯೂಗ್ ಮತ್ತು ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್. ಯಾವುದೋ ಆಘಾತದಿಂದಲೋ, ಇನ್ನು ತಡಿಯಲಿಕ್ಕೆ ಆಗೋಲ್ಲ ಅನ್ನೋವಂಥ ಸ್ಟ್ರೆಸ್ ಆದಾಗ, ಈಗಿರೋ ಸ್ಥಿತಿಯನ್ನ ಭರಿಸಲು ಸಾಧ್ಯವಿಲ್ಲ ಅನ್ನೋವಂಥ ಸ್ಥಿತಿ ತಲುಪಿದಾಗ ಇರೋಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೆ ಮನಸ್ಸು, ಈ ಪ್ರಯತ್ನಗಳೇ ಅಮ್ನೇಶ್ಯ (ಅಂದರೆ ಮರೆವು, ಆಟೋ ಬಯಾಗ್ರಾಫಿಕಲ್ ಅಥವಾ ಸಿಟುಯೇಶನಲ್ ಇತ್ಯದಿ) ಫ್ಯೂ ಗ್,(ಇರೋ ಸ್ಥಿತಿಯಿಂದ ಇರೋ ಜಾಗದಿಂದ ಓಡಿಹೋಗಿಬಿಡುವುದು, ಮತ್ತೆ ಹೀಗೆ ಓಡಿ ಹೋದವರಿಗೆ ತಮ್ಮ ಜೀವನದ ಬಗ್ಗೆ ಪೂರ್ತಿ ಮರೆತು ಹೋಗಿ ಬಿಟ್ಟಿರುತ್ತದೆ) ಹಾಗೂ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಆಗಿ ಪರಿವರ್ತನೆ ಗೊಳ್ಳುತ್ತದೆ. ಈಗ ಶ್ವೇತಾಳಿಗೆ ಆಗಿರುವುದೂ ಇದೇ. ಅಷ್ಟು ದಿನದಿಂದ ಗಂಡು ಹುಡುಕುತ್ತಿರುವ ನಿಮ್ಮ ಚಟುವಟಿಕೆಗಳು, ಅವರ ಸ್ನೇಹಿತೆಯರಿಗೆಲ್ಲಾ ಮಕ್ಕಳಾಗಿ ಮದುವೆಯಾಗಿದ್ದರೂ ತನಗೆ ಆಗದಿರುವುದು, ಇವೆಲ್ಲಾ ಅವಳ ಅನ್‌ಕಾನ್‌ಶಸ್ ಮೈಂಡಿನ ಮೇಲೆ ಸಾಕಷ್ಟು ಪರಿಣಾಮ ಬೀರಿವೆ, ಇಂಥಾ ಯಾವುದೋ ಸನ್ನಿವೇಶದಲ್ಲೇ ಅವಳಲ್ಲಿ ‘ಅವನು’ ಹುಟ್ಟಿಕೊಂಡಿದ್ದಾನೆ. ಆವನಿಗೊಂದು ಚಂದದ ಅವಳಿಗೆ ಇಷ್ಟವಾಗೋ ಹೆಸರಿದೆ, ಅವನ ಸ್ವಭಾವಗಳೆಲ್ಲವೂ ಖುಷಿಕೊಡುವಂಥದ್ದೇ ಯಾಕೆಂದರೆ ನನ್ನ ಹುಡುಗ ಹಿಂಗಿರಬೇಕು ಅನ್ನುತ್ತಿದ್ದ ಅವಳ ಒಳ ಮನಸ್ಸು, ‘ದಿ ಅನ್ ಕಾನ್‌ಶಸ್ ಮೈಂಡ್’ ಅವನನ್ನು ಸೃಷ್ಟಿಸಿದೆ, ಚಿರಾಗ್ ಅನ್ನುವ ಹುಡುಗ ಸೃಷ್ಟಿಯಾಗಿರೋದೇ ಹೀಗೆ. ಅವನು ನೋಡೋಕ್ಕೆ ಅವಳಿಗೆ ಇಷ್ಟವಾಗುವ ಆಕ್ಟರ್ ಥರ ಇದಾನೆ, ನೋಡಿದ ತಕ್ಷಣ ನನಗೂ ಅವನನ್ನು ಎಲ್ಲೋ ನೋಡಿದ್ದೇನೆ ಅನ್ನಿಸಿತು ಅವನು ಹಿಂದಿ ಸೀರಿಯಲ್ ಒಂದರಲ್ಲಿ ಆಕ್ಟ್ ಮಾಡುತ್ತಾನೆ. ಅವನ ಫೋಟೋವನ್ನ ತನಗೆ ತಾನೇ ಮೈಲ್ ಮಾಡಿಕೊಂಡಿದ್ದಾಳೆ ತನ್ನ ಹುಡುಗ ಹೀಗೇ ಇದಾನೆ ಅಂತ ನಿಮ್ಮ ಮಗಳು ಕಲ್ಪಿಸಿಕೊಂಡಿದ್ದಾಳೆ. ಅದನ್ನೇ ನಂಬಿದ್ದಾಳೆ. ಅಶ್ಟೇ ಕೇರ್ಫುಲ್ ಆಗಿ ನಿಮಗೂ ಅವಳಿಗೂ ಗೊತ್ತಾಗದಂತೆ ಅವನು ಇನ್ನೊಬ್ಬ ಹುಡುಗನೇ ಎಂಬಂತೆ ಸನ್ನಿವೇಶಗಳನ್ನ ಅವಳ ಒಳ ಮನಸ್ಸು ಸೃಷ್ಟಿಸಿದೆ, ಅವರಿಬ್ಬರೂ ಗಂಟೆಗಟ್ಟಲೆ ಮಾತಾಡಿಕೊಂಡಿದ್ದಾರೆ. ಅವನು ಇವಳಿಗೆ ಗಿಫ್ಟ್ ಕಳಿಸಿದ್ದಾನೆ. ಅವಳ ಪಾಲಿಗೆ ನಮ್ಮ ನಿಮ್ಮಶ್ಟೇ ಅವನೂ ಜೀವಂತ. ಈ ಎರೆಡು ಪರ್ಸನಾಲಿಟೀಸ್‌ಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಚನ್ನಾಗಿ ಗೊತ್ತು-’ ತಾನು ಹೇಳುತ್ತಿರುವುದು ಮುಂದೆ ಕೂತಿರುವವರಿಗೆ ಅರ್ಥವಾಗುತ್ತಿದೆಯೋ ಇಲ್ಲವೂ ಅನುಮಾನದಲ್ಲಿ ಮಾತು ನಿಲ್ಲಿಸಿದ ಕೌಶಿಕ್. ಒಬ್ಬಳು ಹುಡುಗಿಯಲ್ಲಿ ಹುಡುಗನ ಪರ್ಸನಾಲಿಟಿ ಹುಟ್ಟಿಕೊಳ್ಳೋಕ್ಕೆ ಹೇಗೆ ಸಾಧ್ಯ? ತಮ್ಮ ಪ್ರಶ್ನೆ ಮುಂದಿಟ್ಟರು ಚಕ್ರಪಾಣಿ. ಒಂದು ಹುಡುಗಿಯಲ್ಲಿ, ಇನ್ನೊಂದು ಹುಡುಗಿ ಹುಟ್ಟಿಕೊಳ್ಳೋದು, ಅಥವಾ ಐದು ವರ್ಶದ ಮಗುವಿನ ವ್ಯಕ್ತಿತ್ವ ಹುಟ್ಟಿಕೊಳ್ಳೋದು ಎಷ್ಟು ಸಹಜವೋ ಇದೂ ಅಷ್ಟೇ ಸಹಜ. ಹುಡುಗ ಹುಡುಗಿ ಅನ್ನೋ ಲಿಂಗ ವ್ಯತ್ಯಾಸವನ್ನಾಗಾಲಿ ದೊಡ್ಡವರು ಚಿಕ್ಕವರು ಎಂಬ ವಯಸ್ಸಿನ ವ್ಯತ್ಯಾಸವನ್ನಿಟ್ಟುಕೊಂಡಾಗಲೀ ನಮ್ಮ ಒಳ ಮನಸ್ಸು ಇನ್ನೊಂದು ವ್ಯಕ್ತಿತ್ವವನ್ನ ಸೃಷ್ಟಿಸೋಲ್ಲ. ತನ್ನನ್ನು ಕಾಡುತ್ತಿರುವ ಸಮಸ್ಯೆಗಳಿಗೆ, ಅದಕ್ಕೆ ಸರಿಹೋಗುವಂಥ ಅದನ್ನು ನಿವಾರಿಸುವಂಥ ವ್ಯಕ್ತಿತ್ವಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿ ಒಬ್ಬ ಹುಡುಗ ಮಾತ್ರ ಇಲ್ಲ ಇನ್ನೊಂದು ಹುಡುಗಿಯೂ ಇದ್ದಾಳೆ, ಶ್ವೆತಾಳಿಗಿಂತ ಪವರ್‌ಫುಲ್ ಆದ ಪರ್ಸನಾಲಿಟಿ ಅವಳದು ಅವಳೇ ರಂಗರಾಯರನ್ನು ಆಗ ಕೊಲ್ಲಲು ಹೊರಟಿದ್ದು. ಇದಕ್ಕೆ ಡಿಫೆನ್ಸ್ ಮೆಕ್ಯಾನಿಸಮ್ ಅನ್ನುತ್ತಾರೆ. ಇವಳ ಒಳಗೆ ಇನ್ನೆಷ್ತು ಪರ್ಸನಾಲಿಟಿಗಾಳು ಅಡಗಿ ಕುಳಿತಿವೆಯೋ ಗೊತ್ತಿಲ್ಲಾ. ಅವನ್ನೆಲ್ಲಾ ಒಂದೊಂದಾಗಿ ಹೊರತೆಗೆಯಬೇಕು. ‘ಈಗ ಹುಟ್ಟಿಕೊಂಡಿರೋ ಇನ್ನೆರೆಡು ಪರ್ಸನಾಲಿಟಿಗಳೂ ನಿನ್ನವೇ. ಅದನ್ನು ನೀನೇ ಸೃಷ್ಟಿಸಿಕೊಂಡಿದ್ದೀಯ’ ಅಂತ ನಿಮ್ಮ ಮಗಳಿಗೆ ಅರ್ಥ ಮಾಡಿಸಬೇಕು, ಅವಳ ಸುತ್ತ ಇರುವ ಸ್ಟ್ರೆಸ್ ಕಮ್ಮಿ ಮಾಡಬೇಕು ಇದಕ್ಕೆಲ್ಲಾ ತುಂಬ ಸಮಯವಾಗಬಹುದು.. ಕೌಶಿಕ್ ಹೇಳುತ್ತಾ ಹೋದ, ಅವನು ಹೇಳಿದ್ದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದ ಚಕ್ರಪಾಣಿ, ರಂಗರಾಯರ ಮಧ್ಯೆ ಮೌನ ಹರಡಿತ್ತು.

ಆ ರೂಮಿನಿಂದ ಹೊರಬಂದ ಮೇಲೆ ರಂಗರಾಯರು ಏನನ್ನೋ ನಿಶ್ಚಯಿಸಿದವರಂತೆ ‘ನಾನಿದನ್ನ ಅವ್ಳಿಗೆ ಹೇಳ್ಬಾರ್ದು ಅನ್ಕೊಂಡಿದಿನಿ. ಅವ್ಳು ಈ ಸ್ಥಿತಿಲೇ ಖುಷಿಯಾಗಿದಾಳೆ ಹಾಗೇ ಭ್ರಮೇಲೇ ಇದ್ದು ಬಿಡ್ಲಿ’ ಅಂದರು. ಚಕ್ರಪಾಣಿಗೆ ಯಾಕೋ ತಮ್ಮ ಮಗಳು ಹೆಂಡತಿಯ ನೆನಪಾಯಿತು ಅವರು ಸುಖವಾಗಿದ್ದಾರ? ಅವರಿಗೇನು ಚಿಂತೆಯಿಲ್ಲವಾ? ಮಗ ನಿಜಕ್ಕೂ ನೆಮ್ಮದಿಯಾಗಿದ್ದಾನ ಅವನನ್ನೇನು ಕಾಡುತ್ತಿಲ್ಲವಾ? ನಿಜಕ್ಕೂ ನಾನು ಬದುಕಿದ ರೀತಿ ನನ್ನಲ್ಲಿ ಉಲ್ಲಾಸ ತುಂಬಿದೆಯಾ? ಅಥವಾ ಎಲ್ಲವೂ ಸರಿ ಇದೆ ಎನ್ನುವ ನಂಬಿಕೆಯಲ್ಲಿ ಇಷ್ಟು ದಿನ ಬದುಕಿಬಿಟ್ಟೆನಾ? ಎಲ್ಲಾರೂ ಇಂಥಾ ಒಂದಲ್ಲಾ ಒಂದು ಭ್ರಮೆಯಲ್ಲಿ ಬದುಕುತ್ತಿದ್ದೇವೇನೋ ಎಂದು ಯೋಚಿಸುತ್ತಾ ಏನನ್ನೂ ಉತ್ತರಿಸದೆ ಸುಮ್ಮನಾದರು. ನಾನು ನಿಜವಾಗಲೂ ನಾನೇನಾ ಅನ್ನುವ ಪ್ರಶ್ನೆ ಅವರ ಮೈಮನಸ್ಸುಗಳನ್ನು ತಾಗಿಯೂ ತಾಗದಂತೆ ಸವರಿಕೊಂಡು ಹೋಯಿತು.